ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿಯ ಹೋಮ್ ಸ್ಟೇಯಲ್ಲಿ ತಂಗಿದ್ದ ವಿದೇಶಿ ಪ್ರವಾಸಿ ಮಹಿಳೆ ಮೇಲಿನ ಅತ್ಯಾ* ಚಾರ ಪ್ರಕರಣದ ಬೆನ್ನಲ್ಲೇ ರಾಜ್ಯ ಸರಕಾರವು ಪ್ರವಾಸಿಗರ ಸುರಕ್ಷೆಗೆ ಹೋಮ್ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ಮಾರ್ಗಸೂಚಿ ಹೊರಡಿಸಿದೆ.
ಆದರೆ ರಾಜ್ಯದ ಪ್ರಮುಖ 14 ಪ್ರವಾಸಿ ತಾಣಗಳಲ್ಲಿ 2,200ಕ್ಕೂ ಹೆಚ್ಚು ಅನಧಿಕೃತ ಹೋಮ್ ಸ್ಟೇ, ರೆಸ್ಟೋರೆಂಟ್ ಹಾಗೂ ರೆಸಾರ್ಟ್‌ಗಳು ಇರುವುದು ಬೆಳಕಿಗೆ ಬಂದಿವೆ.
ಮೈಸೂರು ಜಿಲ್ಲೆಯ ಎರಡು ರಾಷ್ಟ್ರೀಯ ಉದ್ಯಾನ ವನಗಳ ಅಂಚಿನಲ್ಲಿ 20ಕ್ಕೂ ಹೆಚ್ಚು ರೆಸಾರ್ಟ್, ಹೊಟೇಲ್‌ಗಳು ಅಕ್ರಮವಾಗಿ ತಲೆ ಎತ್ತಿವೆ ಎನ್ನಲಾಗಿದೆ. ಕೊಡಗು ಜಿಲ್ಲೆಯಲ್ಲಿ 1,200 ಹೋಮ್ ಸ್ಟೇಗಳು ಅನುಮತಿ ಪಡೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
14 ಜಿಲ್ಲೆಗಳಲ್ಲಿ ಶೇ. 40ರಷ್ಟು ಅನಧಿಕೃತ ಹೋಮ್ ಸ್ಟೇಗಳು ಕಾರ್ಯನಿರ್ವಹಿಸುತ್ತಿವೆ. ಕೆಲವೆಡೆ ಸರ್ಕಾರದ ಮಾರ್ಗಸೂಚಿಯಂತೆ ವಿವಿಧ ಇಲಾಖೆಗಳ ಅನುಮತಿ ಪಡೆದು ರೆಸಾರ್ಟ್, ಹೋಮ್‌ಸ್ಟೇಗಳು ಕಾರ್ಯನಿರ್ವಹಿಸುತ್ತಿದ್ದರೂ ಬಹುತೇಕ ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯಾಡಳಿತದ ಅನುಮತಿ ಪಡೆಯದಿರುವುದು ಕಂಡುಬಂದಿದೆ.
ಇತ್ತೀಚೆಗಷ್ಟೇ ರಾಜ್ಯ ಸರಕಾರದ ಮಾರ್ಗಸೂಚಿ ಹಿನ್ನೆಲೆಯಲ್ಲಿ ನೋಂದಣಿ ಯಾಗದಿರುವ ಅನಧಿ ಕೃತ ರೆಸಾರ್ಟ್, ಹೋಮ್ ಸ್ಟೇ ಹಾಗೂ ಹೊಟೇಲ್, ಲಾಡ್ಜ್ ಗಳನ್ನು ಕೂಡಲೇ ನೋಂದಣಿ ಮಾಡಿಕೊಳ್ಳುವಂತೆ ಆಯಾ ಜಿಲ್ಲಾ ವ್ಯಾಪ್ತಿಗಳಲ್ಲಿ ಸಭೆ ಕರೆದು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಲಭ್ಯ ಮಾಹಿತಿಯ ಪ್ರಕಾರ ಕೊಡಗು ಜಿಲ್ಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ಹೋಮ್‌ಸ್ಟೇಗಳು ನೋಂದಣಿಯಾಗಿದ್ದು, ಈ ಪೈಕಿ 1,200ಕ್ಕೂ ಹೆಚ್ಚು ಅನಧಿಕೃತ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಬೆಳಿಗ್ಗೆ ವಿದ್ಯುತ್ ಕಂಬಕ್ಕೆ ಜೆಸಿಬಿ ಡಿಕ್ಕಿ, ಸಂಜೆ ಮಹಿಳೆಯರ ಮೇಲೆ ಬಿದ್ದ ಕಂಬ..! 4 ತಿಂಗಳ ಗರ್ಭಿಣಿ ಸೇರಿ ಇಬ್ಬರು ಸಾವು..!