ನ್ಯೂಸ್ ನಾಟೌಟ್: ಪಾಕಿಸ್ತಾನ ಪರ ಗೂಢಚರ್ಯೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಟ್ರಾವೆಲ್ ವ್ಲಾಗರ್ ಜ್ಯೋತಿ ಮಲ್ಹೋತ್ರಾಗೆ ಕೇರಳದ ಪ್ರವಾಸೋದ್ಯಮ ಇಲಾಖೆ ಆತಿಥ್ಯ ನೀಡಿತ್ತು ಎಂಬ ವಿಚಾರ ಈಗ ಬಯಲಾಗಿದೆ. ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪ ಎದುರಿಸುತ್ತಿರುವ ಜ್ಯೋತಿ ಮಲ್ಹೋತ್ರಾ, ಕೇರಳ ರಾಜ್ಯ ಪ್ರಾಯೋಜಿತ ಪ್ರವಾಸೋದ್ಯಮ ಅಭಿಯಾನದ ಭಾಗವಾಗಿದ್ದರು. ಕೇರಳದ ಪ್ರವಾಸೋದ್ಯಮವನ್ನು ಪ್ರಚಾರ ಮಾಡುವುದಕ್ಕೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಭಾಗವಹಿಸಿದ್ದ ಜ್ಯೋತಿ ಮಲ್ಹೋತ್ರಾ ಕೇರಳ ಸರ್ಕಾರದ ಪ್ರವಾಸೋದ್ಯಮ ಅಭಿಯಾನದ ಭಾಗವಾಗಿ 5 ರಾಜ್ಯಗಳಿಗೆ ಪ್ರವಾಸ ತೆರಳಿದ್ದರು ಎಂಬ ವಿಚಾರ ಆರ್‌ಟಿಐ ಮೂಲಕ ಪಡೆದ ಮಾಹಿತಿಯಿಂದ ಈಗ ಬಯಲಾಗಿದೆ.
ಸುದ್ದಿಸಂಸ್ಥೆ ಎಎನ್‌ಐ ವರದಿ ಪ್ರಕಾರ, ಕೇರಳ ಸರ್ಕಾರವು ರಾಜ್ಯವನ್ನು ಜಾಗತಿಕ ಪ್ರವಾಸಿ ತಾಣವಾಗಿ ಉತ್ತೇಜಿಸುವ ಅಭಿಯಾನದ ಭಾಗವಾಗಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಿಗೆ ಪ್ರವಾಸ ಆಯೋಜಿಸಿತ್ತು. ಇದಕ್ಕಾಗಿ ಕೇರಳ ಸರ್ಕಾರವು ಅವರ ಪ್ರಯಾಣ, ವಸತಿ ಮತ್ತು ಆಹಾರ ವೆಚ್ಚಗಳನ್ನು ಭರಿಸಿದೆ. ಮತ್ತು ಅವರ ವಾಸ್ತವ್ಯದ ಸಮಯದಲ್ಲಿ ಅವರಿಗೆ ವಿಡಿಯೋ ಮಾಡುವುದಕ್ಕೆ ಸಹಾಯ ಮಾಡಲು ಖಾಸಗಿ ಏಜೆನ್ಸಿಯನ್ನು ನೇಮಿಸಿಕೊಂಡಿತು. ಕೇರಳ ಸರ್ಕಾರದ ಈ ಅಭಿಯಾನಕ್ಕೆ ಆಯ್ಕೆಯಾದ ಪ್ರಭಾವಿಗಳಲ್ಲಿ ಜ್ಯೋತಿ ಮಲ್ಹೋತ್ರಾ ಕೂಡ ಒಬ್ಬರಾಗಿದ್ದರು.
ಆರ್‌ಟಿಐನಲ್ಲಿ ಸಿಕ್ಕ ಮಾಹಿತಿಯಂತೆ ಅಧಿಕೃತ ದಾಖಲೆಗಳ ಪ್ರಕಾರ, ಜ್ಯೋತಿ ಮಲ್ಹೋತ್ರಾ ಅವರು 2024 ಮತ್ತು 2025 ರ ನಡುವೆ ಕೇರಳದ ಪ್ರವಾಸಿ ತಾಣಗಳಾದ ಕಣ್ಣೂರು, ಕೋಯಿಕ್ಕೋಡ್, ಕೊಚ್ಚಿ, ಆಲಪ್ಪುಳ ಮತ್ತು ಮುನ್ನಾರ್‌ಗೆ ಪ್ರವಾಸ ಮಾಡಿದರು. ಜನವರಿ 2024 ಮತ್ತು ಮೇ 2025 ರ ನಡುವೆ ಸಕ್ರಿಯವಾಗಿರುವ ಹಲವಾರು ಇತರ ಡಿಜಿಟಲ್ ಕ್ರಿಯೇಟರ್‌ಗಳ ಜೊತೆ ಇವರು ಸೇರಿದ್ದರು. ಪಹಲ್ಗಾಮ್ ದಾಳಿಯ ನಂತರ ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿರುವ ವಿಚಾರ ಬಹಿರಂಗವಾಗಿದ್ದು, ಗುಪ್ತಚರ ಅಧಿಕಾರಿಗಳು ಆಕೆಯನ್ನು ಬಂಧಿಸಿದ್ದರು. ಜ್ಯೋತಿ ಮಲ್ಹೋತ್ರಾ ಪಾಕ್ ಪರ ಬೇಗುಗಾರಿಕೆಗಾಗಿ ಪಾಕಿಸ್ತಾನಕ್ಕೆ ಹಲವು ಬಾರಿ ಭೇಟಿ ನೀಡಿದ್ದಳು ಹಾಗೂ ಪಾಕಿಸ್ತಾನ ಹೈಕಮಿಷನ್ ಸಿಬ್ಬಂದಿ ಸೇರಿದಂತೆ ಪಾಕಿಸ್ತಾನ ಗುಪ್ತಚರ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದ್ದಳು. ಆದರೆ ಪ್ರಕರಣ ಬೆಳಕಿಗೆ ಬಂದ ನಂತರ ಪಾಕ್‌ನ ಈ ಅಧಿಕಾರಿಗಳಲ್ಲಿ ಒಬ್ಬರನ್ನು ಭಾರತವೂ ಪಾಕಿಸ್ತಾನಕ್ಕೆ ಗಡೀಪಾರು ಮಾಡಿತ್ತು. ಪಾಕ್ ಪರ ಬೇಹುಗಾರಿಕೆಗೆ ಸಂಬಂಧಿಸಿದಂತೆ ಜ್ಯೋತಿ ಮಲ್ಹೋತ್ರಾ ಸೇರಿದಂತೆ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವೆಡೆಯಿಂದ ಒಟ್ಟು 12 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳನ್ನು ಭೇಟಿಯಾಗಿದ್ದಾಗಿ ವಿಚಾರಣೆ ವೇಳೆ ಜ್ಯೋತಿ ಮಲ್ಹೋತ್ರಾ ಒಪ್ಪಿಕೊಂಡಿದ್ದಾರೆ. ಭಾರತದಲ್ಲಿನ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಡ್ಯಾನಿಶ್ ಅವರನ್ನು ಭೇಟಿಯಾಗಿದ್ದಾಗಿಯೂ ಆಕೆ ಹೇಳಿದ್ದಾಳೆ. ಅಲ್ಲದೇ ಡ್ಯಾನಿಶ್ ಪರಿಚಯ ಮಾಡಿಕೊಟ್ಟಿದ್ದ ಪಾಕಿಸ್ತಾನಿ ಪ್ರಜೆ ಅಲಿ ಹಸನ್ ಎಂಬಾತನನ್ನು ತಾನು ಭೇಟಿಯಾಗಿದ್ದಾಗಿ ಆಕೆ ಹೇಳಿಕೊಂಡಿದ್ದಾಳೆ.