ಕಗ್ಗತ್ತಲ ಗೂಡಿನಲಿ
ಬೆಳಕು ಹರಿದ ಹೊತ್ತು
ಬಾನಂಚಿಗೆ ಮೊಗವ
ತಿರುಗಿಸಿದಾತ
ಹೊಟ್ಟೆಯಂಚಿಗೆ
ತಣ್ಣೀರ ಬಟ್ಟೆ ಸುತ್ತಿದ
ಜನರ ಕಣ್ಣೀರ ಹನಿಗಳಲಿ
ನಗು ಉಕ್ಕಿಸಿದಾತ
ಎಲೆಯಿರದ ಮರಗಳಲಿ
ಗರಿಯಿರದ ಹಕ್ಕಿಗಳಿಗೆ
ದಣಿವಿರದ ದಾರಿಯಲಿ
ಕಾಪು ನಿರ್ಮಿಸಿದಾತ
ಹೊಂಗಿರಣ ಸಾಲಿನಲಿ
ಕಪ್ಪು ಮೋಡದ ಹಿಂದೆ
ಬೆಂದ ಭೂಮಿಗೆ
ಮಳೆಯ ತಂದಾತ
ಸರಳತೆಯ ಬತ್ತಿಯಲಿ
ಜ್ಞಾನದಾಹವ ಬಿತ್ತಿ
ಭತ್ತದ ಗದ್ದೆಗಳಲಿ
ಹಸಿರ ಪೈರು ಬೆಳೆದಾತ
ಗುರಿಯಿರದ ದಾರಿಯಲಿ
ನೀಲ ಸಾಗರದಾಚೆ
ಕಗ್ಗತ್ತಲ ಆಕಾಶದಲ್ಲಿ
ಚುಕ್ಕಿ ತೋರಿಸಿದಾತ
ಎರಡು ಗೆರೆಗಳಾಚೆ
ಗುರುತಿರದ ದಾರಿಯಲ್ಲಿ
ಬೆಂದ ಜೀವಕೆ
ಕಾರಂಜಿಯುಕ್ಕಿಸಿದಾತ
ಚಿಗುರು ಎಲೆಗಳ ಮಧ್ಯೆ
ಮೊಗ್ಗು ಮೂಡಿಸಿ
ಹೂವ ಕನಸ
ಮನ ಮನದಲ್ಲಿ ಬಿತ್ತಿದಾತ