ಕರಾವಳಿಕೊಡಗುರಾಜಕೀಯ

ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿದ ಶಾಸಕ..! ಹಣವಿಲ್ಲ ಎಂದು ಅನಾರೋಗ್ಯ ಪೀಡಿತ ಮಹಿಳೆ ಹೇಳಿದ್ದಕ್ಕೆ ಕರಗಿದ ಮನಸ್ಸು..! ಏನಿದು ಸ್ಟೋರಿ ಇಲ್ಲಿದೆ ಡಿಟೇಲ್ಸ್‌..

ನ್ಯೂಸ್ ನಾಟೌಟ್ : ಕೆಲವೊಬ್ಬರು ರಾಜಕಾರಣಿಗಳು ಜನರ ಬಳಿ ಹೋಗಿ ಕುಂದುಕೊರತೆಗಳನ್ನು ಆಲಿಸಿ ಅವರ ಸಮಸ್ಯೆ ಬಗೆಹರಿಸುವುದನ್ನು ಕೇಳಿದ್ದೇವೆ. ಜನರ ಸೇವೆಯಲ್ಲೇ ನಿರತರಾಗುವುದನ್ನೂ ಕೇಳಿದ್ದೇವೆ. ಆದರೆ ಇಲ್ಲೊಬ್ಬರು ರಾಜಕಾರಣಿ ಬಡರೋಗಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಿ ಮಾನವೀಯತೆ ಮೆರೆದಿದ್ದಾರೆ!.


ಮಾನವೀಯತೆಯೇ ಮರೆಯಾಗುತ್ತಿರುವ ಈ ಸಮಾಜದಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಬಡ ಜನರ ಸೇವೆಗೆ ಮುಂದಾಗುತ್ತಾರೆ. ಹೌದು,ಬಡ ಮಹಿಳೆಯೊಬ್ಬಳು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾಗ ಆಕೆಗೆ ರಾಜಕಾರಣಿಯೊಬ್ಬರು ಸ್ವತಃ ಆಪರೇಷನ್ ಮಾಡಿ ಅವರ ಕಷ್ಟಕ್ಕೆ ಮಿಡಿದಿದ್ದಾರೆ. ಅವರೇ ಕುಣಿಗಲ್‌ನ ಕಾಂಗ್ರೆಸ್‌ ಶಾಸಕ (Kunigal MLA) ಡಾ. ಎಚ್‌.ಡಿ. ರಂಗನಾಥ್ (Dr. HD Ranganath). ಅವರು ಬಡ ಮಹಿಳೆಗೆ ಸ್ವತಃ ತಾವೇ ಶಸ್ತ್ರಚಿಕಿತ್ಸೆ ನಡೆಸಿ ತಮ್ಮ ವೃತ್ತಿಗೂ ಬದುಕಿಗೂ ಘನತೆ ತುಂಬಿದ್ದಾರೆ.


ಕುಣಿಗಲ್ ತಾಲೂಕಿನ ಕುಂದೂರು ಗ್ರಾಮದ ಆಶಾ ಎಂಬ ಮಹಿಳೆಗೆ ಹತ್ತು ವರ್ಷದ ಹಿಂದೆ ಕಾಲಿನ ಕೀಲು ತಪ್ಪಿಹೋಗಿದ್ದು,ನಡೆಯೋದಕ್ಕೂ ಅಸಾಧ್ಯವೆಂಬಂತಿತ್ತು. ಆಗ ಅವರಿಗೆ ಯಶಸ್ವಿನಿ ಯೋಜನೆಯಡಿ ಉಚಿತವಾಗಿ ಶಸ್ತ್ರಕ್ರಿಯೆ ನಡೆಸಿ ಕೀಲನ್ನು ಮರು ಜೋಡಣೆ ಮಾಡಲಾಗಿತ್ತು. ಆ ಬಳಿಕ ಸ್ವಲ್ಪ ಮಟ್ಟಿಗೆ ಸುಧಾರಿಸಿದ್ದರು. ಆದರೆ ಇದೀಗ ಅಂದರೆ ಹತ್ತು ವರ್ಷದ ಬಳಿಕ ಅವರಿಗೆ ಮತ್ತೆ ಕಾಲಿನ ಕೀಲು ಡಿಸ್‌ ಲೊಕೇಟ್‌ ಆಗಿತ್ತು. ಮತ್ತೊಮ್ಮೆ ಹೋಗಿ ಆಪರೇಷನ್‌ ಮಾಡಿಸಿಕೊಳ್ಳೋಣ ಎಂದರೆ ಒಂದೇ ಶಸ್ತ್ರಚಿಕಿತ್ಸೆಯನ್ನು ಎರಡು ಬಾರಿ ಮಾಡುವ ಹಾಗೆ ಇಲ್ಲ. ಅದಕ್ಕೆ ವಿಮಾ ಯೋಜನೆ ಅನುಮತಿ ನೀಡುವುದಿಲ್ಲ. ಹೀಗಾಗಿ ಮುಂದೇನು ಎಂಬ ಚಿಂತೆ ಅವರನ್ನು ಕಾಡತೊಡಗಿತು.


ಇದಕ್ಕೆ 4ರಿಂದ ಐದು ಲಕ್ಷ ರೂ. ಬೇಕು. ಅಷ್ಟೊಂದು ಮೊತ್ತವನ್ನು ಒಂದುಗೂಡಿಸುವುದೇ ಕಷ್ಟ. ಆ ಶಕ್ತಿ ಅವರ ಕುಟುಂಬಕ್ಕೆ ಇರಲಿಲ್ಲ.ಈ ವೇಳೆ ಅವರಿಗೆ ನೆನಪಾಗಿದ್ದೇ ಶಾಸಕರು.ನೋಡೋಣ ಏನಾದರೂ ಪರಿಹಾರ ಸಿಗಬಹುದು ಎಂದು ಮಹಿಳೆ ಕುಟುಂಬಸ್ಥರು ಕುಣಿಗಲ್‌ ಶಾಸಕ ಡಾ. ರಂಗನಾಥ್‌ ಅವರ ಬಳಿಗೆ ಬಂದು ನೋವು ತೋಡಿಕೊಂಡಿದ್ದರು. ಮೂಳೆ ಡಿಸ್‌ ಲೊಕೇಟ್‌ ಆಗುವುದರಿಂದ ಉಂಟಾಗುವ ಅತೀವ ನೋವನ್ನು ಹೇಳಿಕೊಂಡಿದ್ದರು.ಈ ನೋವನ್ನು ಆಲಿಸಿದ ಶಾಸಕರಿಗೂ ಅವರ ಕಷ್ಟ ಅರಿವಾಯಿತು.ಹೇಗಾದರೂ ಮಾಡಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ನಿರ್ಧರಿಸಿದರು.

ಮಹಿಳೆಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಉಚಿತವಾಗಿ ಸ್ವತಃ ತಾವೇ ಆಪರೇಷನ್ ಮಾಡಿದರು ಶಾಸಕ ಡಾ. ರಂಗನಾಥ್.‌ ಮೂಳೆ ಮತ್ತು ಕೀಲು ಸಮಸ್ಯೆ ಇರುವ ಮಹಿಳೆಗೆ ತಾವೇ ಆಪರೇಷನ್‌ ಮಾಡಲು ಮುಂದಾದ ಡಾ. ರಂಗನಾಥ್‌ ಅವರ ಕರ್ತವ್ಯನಿಷ್ಠೆ ಮತ್ತು ಜನರೆಡೆಗಿನ ಅವರ ಪ್ರೀತಿ ಭಾರಿ ಸದ್ದು ಮಾಡಿದೆ. ಡಾ. ಎಚ್‌.ಡಿ. ರಂಗನಾಥ್‌ ಅವರು ಮೂಲತಃ ಆರ್ಥೋಪೆಡಿಕ್ ವೈದ್ಯರಾಗಿದ್ದು, ಶಾಸಕರಾಗುವ ಮುನ್ನ ವೈದ್ಯರಾಗಿಯೇ ಜನಮನ್ನಣೆ ಗಳಿಸಿದ್ದರು. ಆದರೆ ಈಗ ರಾಜಕಾರಣಿಯಾಗಿದ್ದರೂ ಕೂಡ ಸಮಯವಿದ್ದಾಗ ಈಗಲೂ ಸೇವೆ ನೀಡುತ್ತಾರೆ ಎನ್ನುವುದು ವಿಶೇಷ.ಶಾಸಕರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ.ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದ್ದು,ನೆಟ್ಟಿಗರು ವೈದ್ಯ ಕಮ್ ರಾಜಕಾರಣಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

Related posts

ಸುಳ್ಯ:ನಿಮ್ಮ ಮಕ್ಕಳು ಸಣ್ಣವರಿದ್ದಾಗಲೇ ಕಲಿಕಾ ಆಸಕ್ತಿಯನ್ನು ತೋರಿಸಬೇಕೆ? ಹಾಗಾದ್ರೆ ಅಂಜಲಿ ಮೊಂಟೆಸ್ಸರಿ ಸ್ಕೂಲ್‌ಗೆ ಸೇರಿಸಿ,ದಾಖಲಾತಿ ಪ್ರಾರಂಭಗೊಂಡಿದೆ..

ಆಕೆ ಬಸ್ ಹತ್ತಿದ ಬಳಿಕ ಅನ್ಯಕೋಮಿನ ವಿದ್ಯಾರ್ಥಿಗೆ ಗುಂಪಿನಿಂದ ಹಲ್ಲೆ! ಮಂಗಳೂರಿನಲ್ಲಿ ಮತ್ತೆ ಸುದ್ದಿಯಾದ ನೈತಿಕ ಪೊಲೀಸ್ ಗಿರಿ

ಸಂಪಾಜೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ,ಶಾಸಕಿ ಭಾಗೀರಥಿ ಮುರುಳ್ಯ ಶ್ಲಾಘನೆ