ನ್ಯೂಸ್ ನಾಟೌಟ್: ರಾಯಚೂರಿನಿಂದ ಗುಂಟೂರಿಗೆ ಮಾರಾಟಕ್ಕೆ ಹೊರಟಿದ್ದ ಮೆಣಸಿನಕಾಯಿಯ 10ಕ್ಕೂ ಹೆಚ್ಚು ಲಾರಿಗಳನ್ನು ತೆಲಂಗಾಣ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ರೈತರು ಶನಿವಾರ(ಮಾ.22) ರಾತ್ರಿ ಗುಂಟೂರಿಗೆ ಮೆಣಸಿನಕಾಯಿ ಮಾರಾಟಕ್ಕಾಗಿ ಹೊರಟಿದ್ದರು. ಈ ವೇಳೆ ತೆಲಂಗಾಣದ ನಲ್ಲಗೊಂಡಾ ಜಿಲ್ಲೆಯ ಕೊಂಡಮಲ್ಲೆಪಲ್ಲಿಯಲ್ಲಿ ಪೊಲೀಸರು ಹಾಗೂ ಸೇಲ್ಸ್ ಟ್ಯಾಕ್ಸ್ ಅಧಿಕಾರಿಗಳು 10 ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಮೆಣಸಿನಕಾಯಿಗೆ ಸೆಲ್ಸ್ ಟ್ಯಾಕ್ಸ್ ಮತ್ತು ಜಿಎಸ್ ಟಿ ಕಟ್ಟುವಂತೆ ಒತ್ತಾಯಿಸಿ, ಬಳಿಕ ಲಾರಿಗಳನ್ನು ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ.
ಮೆಣಸಿನಕಾಯಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರಿಗೆ ತೆಲಂಗಾಣದಲ್ಲಿ ಅಧಿಕಾರಿಗಳು ಶಾಕ್ ನೀಡಿದ್ದು, ಅಗತ್ಯ ದಾಖಲೆಗಳನ್ನು ತೋರಿಸಿದರೂ ಕೂಡ ಲಾರಿಗಳನ್ನು ಬಿಡದೇ ಜಪ್ತಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪಹಣಿ, ತಹಶೀಲ್ದಾರ್ ಪತ್ರವನ್ನು ತೋರಿಸಿದರೇ ಅದಕ್ಕೂ ಬೆಲೆ ಕೊಡುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಈ ಕುರಿತು ಕೂಡಲೇ ಸರ್ಕಾರ ಹಾಗೂ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ನ್ಯಾಯ ಕೊಡಿಸುವಂತೆ ರೈತರು ಮನವಿ ಮಾಡಿಕೊಂಡಿದ್ದಾರೆ.