ನ್ಯೂಸ್ ನಾಟೌಟ್ : ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ಕಾಟಕ (ಆಟಿ) ಚಿಕಿತ್ಸಾ ಶಿಬಿರ ಜು. 17 ರಂದು ಆರಂಭಗೊಂಡಿದ್ದು, ಆ. 16ರವರೆಗೆ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಗುರುವಾರ (ಜು. 17) ಕೆವಿಜಿ ಆಯುರ್ವೇದ ಆಸ್ಪತ್ರೆಯಲ್ಲಿ ನೆರವೇರಿತು.
ಚಿಕಿತ್ಸಾ ಶಿಬಿರವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ. ಉದ್ಘಾಟಿಸಿ, ಕರ್ಕಾಟಕ ಮಾಸದಲ್ಲಿ ಹವಾಮಾನ ವೈಪರೀತ್ಯದಿಂದ ಮನುಷ್ಯನ ಶರೀರದಲ್ಲಿ ಉಂಟಾಗುವ ದೋಷ (ವಾತ, ಪಿತ್ತ ಹಾಗೂ ಕಫ) ಅಸ್ಥಿರತೆಯ ನಿವಾರಣೆಗೆ ಆಯುರ್ವೇದದ ಮಹತ್ವವನ್ನು ವಿವರಿಸಿ ಆಟಿ ಚಿಕಿತ್ಸಾ ಶಿಬಿರದ ಉಪಯೋಗವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಹರ್ಷಿತಾ ಎಂ, ಮೆಡಿಕಲ್ ಆಫೀಸರ್ ಡಾ. ಸನತ್ ಕುಮಾರ್ ಡಿ ಜಿ, ಕಾಲೇಜಿನ ಹಾಗೂ ಆಸ್ಪತ್ರೆಯ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಕಲಿಕಾ ವೈದ್ಯರು ಉಪಸ್ಥಿತರಿದ್ದರು.
ಶಿಬಿರದ ವಿಶೇಷತೆಗಳೆನು..?
ಕರ್ಕಾಟಕ ಚಿಕಿತ್ಸೆಯಲ್ಲಿ ಎಣ್ಣೆ ಅಭ್ಯಂಗ, ಸ್ವೇದನ ಚಿಕಿತ್ಸೆ, ಶಿರೋಧಾರ, ತೈಲಧಾರ, ಲೇಪನ ಚಿಕಿತ್ಸೆ, ಕಾಯ ಶೇಕ ಹಾಗೂ ಇನ್ನಿತರ ವಿವಿಧ ರೀತಿಯ ಪಂಚಕರ್ಮ ಚಿಕಿತ್ಸೆಗಳನ್ನು ಆಟಿಯ ವಿಶೇಷ ಆಹಾರ ಪದ್ಧತಿಯೊಂದಿಗೆ ನೀಡಲಾಗುತ್ತಿದ್ದು, ಈ ಶಿಬಿರವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಲಾಗಿದೆ.