ನ್ಯೂಸ್‌ನಾಟೌಟ್: ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಸುನಿಲ್ ಕುಮಾರ್ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಮೆಚ್ಚುಗೆ ಸೂಚಿಸಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲೂ ಕ್ಷೇತ್ರದ ಪ್ರಜ್ಞಾವಂತ ಮತದಾರರು ಬಿಜೆಪಿಗೆ ಬಹುಮತ ನೀಡಲಿದ್ದಾರೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಕಾರ್ಕಳದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುನಿಲ್ ಕುಮಾರ್ ಅವಧಿಯಲ್ಲಿ ಕಾರ್ಕಳ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಪ್ರವಾಸೋದ್ಯಮ, ನೀರಾವರಿ, ಮೂಲಸೌಕರ್ಯ ವ್ಯವಸ್ಥೆ ಒದಗಿಸುವಲ್ಲಿ ಸುನಿಲ್ ಕುಮಾರ್ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಉತ್ತಮ ಜನಬೆಂಬಲ ಸಿಗಲಿದೆ ಎಂದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ ಮಾತನಾಡಿ, ಕಾರ್ಕಳದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಟಿಕೆಟ್ ನೀಡದೆ, ಪಕ್ಷಕ್ಕೆ ಏನೂ ಕೊಡುಗೆ ನೀಡದ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇದು ಪ್ರಾಮಾಣಿಕ ಕಾರ್ಯಕರ್ತರಿಗೆ ಮಾಡಿದ ಅವಮಾನವಾಗಿದೆ. ಇನ್ನು ಇವರು ಕಾರ್ಕಳದ ಜನರ ಸಮಸ್ಯೆಗೆ ಸ್ಪಂದಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಕಾರ್ಕಳದಲ್ಲಿ ಈಗಾಗಲೇ ಜಾತಿ ರಾಜಕಾರಣದ ವಿಚಾರ ಮುಂದಿಟ್ಟುಕೊಂಡು ಅಪಪ್ರಚಾರ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಇಂತಹ ಅಪಪ್ರಚಾರಗಳಿಗೆ ಕಾರ್ಕಳದ ಜನ ಕಿವಿಗೊಡದೆ ಸುನಿಲ್ ಕುಮಾರ್ ಅವರ ಅಭಿವೃದ್ಧಿ ಕೆಲಸಗಳಿಗೆ ಮತ ನೀಡಲಿದ್ದಾರೆ ಎಂದು ಮಣಿರಾಜ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
ನವೀನ್, ಬೋಳ ಜಯರಾಮ ಸಾಲ್ಯಾನ್, ಆರೆಸ್ಸೆಸ್ ವಿಸ್ತಾರಕ್ ಪ್ರಜ್ವಲ್ ಸುದ್ದಿಗೋಷ್ಠಿಯಲ್ಲಿದ್ದರು.