ನ್ಯೂಸ್ ನಾಟೌಟ್: ರಾಜ್ಯದ ಶ್ರೀಮಂತ ದೇವಸ್ಥಾನ ವಾಗಿರುವ ದಕ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇನ್ಮುಂದೆ ಭಕ್ತರಿಗೆ ಬೆಳಗ್ಗಿನ ಉಪಹಾರ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇವಸ್ಥಾನದ ವತಿಯಿಂದ ಭಕ್ತರಿಗೆ ಬೆಳಗಿನ ಉಪಾಹಾರ ನೀಡುವ ಬಗ್ಗೆದೇಗುಲದ ನೂತನ ವ್ಯವಸ್ಥಾಪನ ಸಮಿತಿ ಯೋಜನೆ ರೂಪಿಸಿದ್ದು, ಸದ್ಯದಲ್ಲೇ ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಮೆನು ಹಾಗೂ ಯಾವ ಸಮಯಕ್ಕೆ ಸಿಗಲಿದೆ ಅನ್ನೋದಕ್ಕೆ ಸದ್ಯದಲ್ಲಿಯೇ ಉತ್ತರ ಸಿಗಲಿದೆ.ಈ ಬಗ್ಗೆ ಮುಂದಿನ ದಿನಗಳಲ್ಲಿ ಅಂತಿಮ ನಿರ್ಧಾರವನ್ನು ವ್ಯವಸ್ಥಾಪನ ಸಮಿತಿ ಕೈಗೊಳ್ಳಲಿದ್ದು, ಬಳಿಕ ಈ ಹೊಸ ಯೋಜನೆ ಅನುಷ್ಠಾನಕ್ಕೆ ಬರಲಿದೆ.ಕ್ಷೇತ್ರದಲ್ಲಿ ಈಗಾಗಲೇ ಮಧ್ಯಾಹ್ನ ಹಾಗೂ ರಾತ್ರಿಯ ಭೋಜನ ಪ್ರಸಾದ ವಿತರಿಸಲಾಗುತ್ತಿದೆ.ಈ ಬೆನ್ನಲ್ಲೇ ಇನ್ಮುಂದೆ ಭಕ್ತರಿಗಾಗಿ ಬೆಳಗಿನ ಉಪಹಾರಕ್ಕೆ ಯೋಜನೆ ರೂಪಿಸಲಾಗುತ್ತಿದ್ದು, ಎಲ್ಲವೂ ಅಂದು ಕೊಂಡಂತೆ ನಡೆದರೆ , ಕೆಲವೇ ತಿಂಗಳಲ್ಲಿ ಇದು ಜಾರಿಯಾಗಲಿದೆ. ಇಲ್ಲಿ ದಿನಂಪ್ರತಿ ಸಾವಿರಾರು ಭಕ್ತರು ಬಂದು ದೇವರ ದರ್ಶನ ಪಡೆದು ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಾದಾಗ ಕೆಲವೊಮ್ಮೆ ಹೊಟೇಲ್ ಗಳಿಗೂ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಇರುತ್ತದೆ. ಇನ್ನು ಬೆಳಗಿನ ವೇಳೆಯಂತು ಉಪಾಹಾರಕ್ಕಾಗಿ ಹೆಚ್ಚಿನ ಎಲ್ಲಾ ಹೊಟೇಲ್ ಗಳು ತುಂಬಿ ತುಳುಕಾಡುತ್ತಿರುತ್ತದೆ.ಇದೀಗ ಈ ಯೋಜನೆಯಿಂದ ಭಕ್ತರಿಗೆ ತುಂಬಾ ಪ್ರಯೋಜನ ಸಿಗಲಿದೆ.ಬೆಳಗಿನ ವೇಳೆಯಲ್ಲಿ ಹೊಟೇಲ್ ಮುಂದೆ ಗಂಟೆಗಟ್ಟಲೆ ನಿಲ್ಲುವಂತಹ ಪರಿಸ್ಥಿತಿ ಕೂಡ ಇರಲಾರದು.ರಜಾ ಸಮಯದಲ್ಲಿ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಂಡಾಗ ಪುಟ್ಟ ಮಕ್ಕಳನ್ನು ಹೊಂದಿರುವ ತಾಯಂದಿರು, ವೃದ್ಧರು , ಅನಾರೋಗ್ಯಕ್ಕೀಡಾದವರು ತುಂಬಾ ಕಷ್ಟ ಪಟ್ಟು ಉಪಹಾರ ಸೇವನೆ ಮಾಡಬೇಕಾಗುತ್ತದೆ.ಒಂದು ವೇಳೆ ದೇಗುಲದಲ್ಲಿಯೇ ಬೆಳಗ್ಗಿನ ಉಪಹಾರ ನೀಡಿದರೆ ಭಕ್ತರು ಬೆಳಗ್ಗಿನ ಉಪಹಾರಕ್ಕೆ ಹೆಚ್ಚು ಸಮಯ ವ್ಯಯ ಮಾಡುವ ಅನಿವಾರ್ಯತೆ ಬರೋದಿಲ್ಲ.