ನ್ಯೂಸ್ ನಾಟೌಟ್: ಅಂಗವಿಕಲರೊಬ್ಬರನ್ನು ಕೊಲೆ ಮಾಡಿ ಸಿಮೆಂಟ್ ನಲ್ಲಿ ಮುಳುಗಿಸಿ ಶವವನ್ನು ಸೂಟ್ ಕೇಸ್‍ನಲ್ಲಿ ಇರಿಸಿ ಅದನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ತುಂಬಿ ಎಸೆದು ಹೋದ ಘಟನೆ ಛತ್ತೀಸ್‍ಗಢ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ.
ಕೊಲೆ ಪ್ರಕರಣದ ರಹಸ್ಯ ಬೇಧಿಸಲು ತನಿಖೆ ನಡೆಸಿದ ಪೊಲೀಸರು ಈ ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದ್ದು, ಈ ಸಂಬಂಧ ಮಂಗಳವಾರ(ಜೂ.24) ದಿಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಕರಣದ ಸೂತ್ರಧಾರರು ಎನ್ನಲಾದ ದಂಪತಿಯನ್ನು ಬಂಧಿಸಿದ್ದಾರೆ.
ರಾಯಪುರದ ವಕೀಲ ಅಂಕಿತ್ ಹಾಗೂ ಆತನ ಪತ್ನಿ ಈ ಕೃತ್ಯ ಎಸಗಿದ್ದಾರೆ ಎಂದು ಆರಂಭಿಕ ತನಿಖೆಯಿಂದ ತಿಳಿದು ಬಂದಿದ್ದು, ಭೂಮಿ ದಲ್ಲಾಳಿ ವ್ಯಾಜ್ಯದ ಹಿನ್ನೆಲೆಯಲ್ಲಿ ಕಿಶೋರ್ ಪೈಕ್ರಾ ಎಂಬವರ ಕೊಲೆ ನಡೆದಿದೆ ಎಂದು ರಾಯಪುರ ಎಸ್‍ಎಸ್ಪಿ ಲಾಲ್ ಉಮೇದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಅಂಕಿತ್ ತಂದೆ ಛತ್ತೀಸ್ ಗಢ ಪೊಲೀಸ್ ಇಲಾಖೆಯಲ್ಲಿ ಎಎಸ್ ಐ ಆಗಿ ನಿವೃತ್ತರಾಗಿದ್ದು, ಘಟನೆಯ ಸುತ್ತಮುತ್ತಲಿನ ಸ್ಥಳದ ಸಿಸಿಟಿವಿ ದೃಶ್ಯಾವಳಿ ತಪಾಸಣೆ ವೇಳೆ ಪತ್ತೆಯಾಗಿದ್ದಾರೆ. ಸೋಮವಾರ ರಾಯಪುರದ ಡಿಡಿ ನಗರ ಪ್ರದೇಶವನ್ನು ಪ್ರವೇಶಿಸಿದ ಕಾರಿನಿಂದ ಇಳಿದ ಇಬ್ಬರು ಮೃತದೇಹ ಹೊಂದಿದ್ದ ಟ್ರಂಕ್ ಹೊರತೆಗೆದಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಮುಖ ಮುಚ್ಚಿಕೊಂಡಿರುವ ಮಹಿಳೆ ಕಾರಿನ ಹಿಂದೆ ದ್ವಿಚಕ್ರ ವಾಹನದಲ್ಲಿ ಬಂದಿದ್ದಾಳೆ. ಕಾರಿನ ನಂಬರ್ ಪ್ಲೇಟ್ ಜಜ್ಜಿ ಹಾಕಲಾಗಿತ್ತು.
ಸಂತ್ರಸ್ತ ವ್ಯಕ್ತಿ ಮೊಹದಿ ಗ್ರಾಮದಲ್ಲಿರುವ ತನ್ನ ಭೂಮಿಯನ್ನು ಅಂಕಿತ್ ನೆರವಿನಿಂದ 50 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ ಎನ್ನಲಾಗಿದ್ದು, ಒಪ್ಪಿಕೊಂಡ ಬೆಲೆಗಿಂತ 20 ಲಕ್ಷ ರೂಪಾಯಿ ಕಡಿಮೆ ಹಣವನ್ನು ಈತನಿಗೆ ನೀಡಲಾಗಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಬಂಧಿತ ದಂಪತಿಯನ್ನು ರಾಯಪುರಕ್ಕೆ ಮಂಗಳವಾರ ರಾತ್ರಿ ಕರೆ ತರಲಾಗಿದೆ.