ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಬಡವರು, ಮಧ್ಯಮ ವರ್ಗದ ಜನರಿಗೆ ನೆಮ್ಮದಿಯಿಂದ ಬದುಕು ಅನ್ನುವುದು ಮರೀಚಿಕೆಯಾಗಿಬಿಟ್ಟಿದೆ. ಪ್ರತಿ ದಿನ ಅದು ಇದು ಅಂತ ಒಂದಲ್ಲ ಒಂದು ಕಾನೂನು ಬದಲಾಗುತ್ತಿರುತ್ತದೆ. ಈ ನಡುವೆ ಕೆಲವರು ಇದನ್ನೇ ಒಳ್ಳೆಯ ಅಸ್ತ್ರವಾಗಿ ಬಳಸಿಕೊಂಡು ತಮ್ಮ ಲಾಭಕ್ಕಾಗಿ ಬಡವರಿಂದ ಸುಲಿಗೆ ಮಾಡುವುದಕ್ಕೆ ಮುಂದಾಗಿರುವುದು ವಿಪರ್ಯಾಸ.
ಸದ್ಯ ಪಡಿತರ ಚೀಟಿ ತಿದ್ದುಪಡಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಡಿಸೆಂಬರ್ 31ರ ತನಕ ಸಮಯ ನೀಡಿದೆ. ಗ್ರಾಮ ವನ್ ಮೂಲಕ ಅರ್ಜಿ ಸಲ್ಲಿಕೆಗೆ 25 ರೂ. ನಿಗದಿ ಮಾಡಲಾಗಿದೆ. ಆದರೆ ಸುಳ್ಯ ತಾಲೂಕಿನ ಕೆಲವು ಗ್ರಾಮ ವನ್ ಗಳು ಇದೇ ಒಳ್ಳೆ ಚಾನ್ಸ್ ಅಂತ ಯದ್ವಾತದ್ವಾ ಹಣ ಪೀಕುವುದಕ್ಕೆ ಶುರು ಮಾಡಿಕೊಂಡು ಬಿಟ್ಟಿವೆ. ಬಡವರು ಅಂತ ಇಲ್ಲ ಶ್ರೀ ಮಂತರು ಅಂತ ಇಲ್ಲ ಎಲ್ಲರಿಗೂ 250 ರಿಂದ 300 ರೂ. ತನಕ ಹಣ ಪಡೆದು ಅರ್ಜಿ ರೆಡಿ ಮಾಡಿಕೊಡುತ್ತಾರೆ.
ಸರ್ಕಾರದ ನಿಯಮವೆಲ್ಲ ಗಾಳಿಗೆ ತೂರಿದಂತಾಗಿದೆ. ಈ ಬಗ್ಗೆ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಗ್ರಾಮ ವನ್ ಗಳಲ್ಲಿ ಅರ್ಜಿ ಪಡೆದುಕೊಂಡು ತಾಲೂಕು ಕಚೇರಿಗೆ ಬಂದು ಗಂಟೆ ಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬದಲು ತಾಲೂಕು ನೆಮ್ಮದಿ ಕೇಂದ್ರದಲ್ಲಿಯೇ ಅರ್ಜಿ ಕೊಡುವ ಕೆಲಸ ಮಾಡಿದ್ದರೆ ಒಳ್ಳೆಯದಿತ್ತು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆಹಾರ ಇಲಾಖೆಯವರು ಇದೆಲ್ಲ ಗೊಂದಲವನ್ನು ಪರಿಹರಿಸಿ ಸೂಕ್ತ ವ್ಯವಸ್ಥೆಯನ್ನು ಮಾಡಬೇಕಿದೆ.