ನ್ಯೂಸ್ ನಾಟೌಟ್: ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನು6 ವರ್ಷಗಳ ಕಾಲ ಬಿ ಉಚ್ಚಾಟಿಸಿ ಬಿಜೆಪಿ ಕೇಂದ್ರ ಶಿಸ್ತು ಸಮಿಯಿಂದ ಆದೇಶ ಹೊರಡಿಸಿದೆ. ಬಿಜೆಪಿ ಶಿಸ್ತು ಸಮಿತಿ ಎರಡು ಬಾರಿ ಶೋಕಾಸ್ ನೋಟಿಸ್ ನೀಡಿದ್ದರೂ ಪದೇ ಪದೇ ಪಕ್ಷದ ವಿರೋಧಿ ಚಟುವಟಿಕೆ, ಪಕ್ಷದ ಶಿಸ್ತು ಉಲ್ಲಂಘನೆ ಮಾಡುತ್ತಿದ್ದರು. ಕೊನೆಗೆ ಫೆಬ್ರವರಿ 10 ರಂದು ಶೋಕಾಸ್ ನೋಟಿಸ್ ಗೆ ಯತ್ನಾಳ್ ಉತ್ತರ ನೀಡಿದ್ದರು.
ಯತ್ನಾಳ್ ಉತ್ತರ, ಸ್ಪಷ್ಟನೆ ಒಪ್ಪದ ಕೇಂದ್ರ ಶಿಸ್ತು ಸಮಿತಿ ಇಂದು(ಮಾರ್ಚ್ 26) ಈ ನಿರ್ಧಾರ ಕೈಗೊಂಡಿದೆ. ಈ ಮೂಲಕ ರಾಜ್ಯ ಬಿಜೆಪಿಯಲ್ಲಿನ ಬಣಬಡಿದಾಟಕ್ಕೆ ಕೊನೆಗೂ ಹೈಕಮಾಂಡ್ ಬ್ರೇಕ್ ಹಾಕಿದೆ. ಅಲ್ಲದೇ ಇತರೆ ರೆಬೆಲ್ ನಾಯಕರಿಗೂ ಪರೋಕ್ಷ ಎಚ್ಚರಿಕೆ ಸಂದೇಶ ರವಾನಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಆರೋಪಗಳನ್ನು ಮಾಡಿಕೊಂಡು ಬರುತ್ತಿದ್ದರು. ಅಲ್ಲದೇ ತಮ್ಮದೇ ಒಂದು ತಂಡ ಕಟ್ಟಿಕೊಂಡು ಪ್ರತ್ಯೇಕ ಸಭೆ ಮಾಡುತ್ತಿದ್ದರು. ಈ ಸಂಬಂಧ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿತ್ತು. ಆದರೂ ಸಹ ತಮ್ಮ ಮಾತಿನ ಸಮರ ಮುಂದುವರಿಸಿದ್ದರು. ಹೀಗಾಗಿ ಅಂತಿಮವಾಗಿ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದೆ. ವಿಜಯೇಂದ್ರ ಇದಕ್ಕೆ ಪ್ರತಿಕ್ರಿಯಿಸಿದ್ದು,
“ಪಕ್ಷದ ಹಿರಿಯರು ಹಾಗೂ ವರಿಷ್ಠರು ಈ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿರುವ ಉದಾಹರಣೆ ನಮ್ಮ ಮುಂದಿಲ್ಲ, ಸದ್ಯ @BasanagoudaBJP ರವರ ವಿರುದ್ಧದ ಶಿಸ್ತುಕ್ರಮ ವರಿಷ್ಠರು ಸುದೀರ್ಘ ಅವಧಿಯಿಂದ ಸ್ಥಿತಿ-ಗತಿಗಳನ್ನು ಅವಲೋಕಿಸಿ ಅನಿವಾರ್ಯವಾಗಿ ತೆಗೆದುಕೊಂಡಿರುವ ಕ್ರಮವಾಗಿರುತ್ತದೆ.
ಪಕ್ಷದ ಬೆಳವಣಿಗೆಯಲ್ಲಿನ ಕಹಿ ಘಟನೆಗಳನ್ನು ಉಲ್ಲೇಖಿಸಿ ಪಕ್ಷದ ವರಿಷ್ಠರಿಗೆ ನಾನು ಎಂದೂ ದೂರುಗಳನ್ನು ಹೇಳಿಕೊಂಡಿಲ್ಲ, ದಾಖಲಿಸಿಯೂ ಇಲ್ಲ. ಪೂಜ್ಯ ತಂದೆ ಯಡಿಯೂರಪ್ಪನವರು ಎಲ್ಲರನ್ನೂ ಸಮಚಿತ್ತ ಭಾವದಿಂದ ನೋಡಿ, ಪಕ್ಷವನ್ನು ಕುಟುಂಬದಂತೆ ಬೆಳೆಸಿದ ಮಾದರಿಯಲ್ಲಿಯೇ ನಡೆಯಬೇಕೆಂಬ ಸಂಕಲ್ಪ ಹೊತ್ತು, ಸಂಘದ ಹಿರಿಯರು ಮತ್ತು ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದೇನೆ.
ಕೆಲ ದಿನಗಳ ಹಿಂದೆ ನಡೆದ ಕಹಿ ಪ್ರಸಂಗಗಳಿಂದ ಎಂದಿಗೂ ನಾನು ಉದ್ವೇಗಗೊಳ್ಳಲಿಲ್ಲ, ಯಾರೊಂದಿಗೂ ದುಃಖ ತೋಡಿಕೊಂಡಿಲ್ಲ, ಸಮರ್ಪಣೆ-ತ್ಯಾಗದ ಪಾಠವನ್ನು ಹೇಳಿಕೊಡುವ ಸಂಸ್ಕಾರವಂತ ಸಂಘಟನೆಯ ವ್ಯವಸ್ಥೆಯಲ್ಲಿ ಬೆಳೆದು ಬಂದ ನಾನು ಸಹನೆ-ತಾಳ್ಮೆಯನ್ನು ಜವಾಬ್ದಾರಿ ನಿರ್ವಹಿಸುವ ನಿಟ್ಟಿನಲ್ಲಿ ಆಧಾರ ಸ್ಥಂಭವೆಂದು ಪರಿಗಣಿಸಿ ಮುನ್ನಡಿದಿದ್ದೇನೆ. ಈ ನಿಟ್ಟಿನಲ್ಲಿ ವರಿಷ್ಠರು ತೆಗೆದುಕೊಂಡಿರುವ ಶಿಸ್ತು ಕ್ರಮವನ್ನು ನಾನು ಸಂಭ್ರಮಿಸಲಾರೆ ಬದಲಾಗಿ ಈ ಬೆಳವಣಿಗೆಯನ್ನು ದುರದೃಷ್ಟಕರವೆಂದು ದುಃಖಿಸುತ್ತೇನೆ. ವಿಶ್ವಾಸ ರಾಜಕಾರಣವನ್ನು ಎಲ್ಲರೊಡಗೂಡಿ ಮುಂದುವರೆಸಿ ಪಕ್ಷ ಸಂಘಟನೆಗೆ ಕಟ್ಟಕಡೆಯ ಕಾರ್ಯಕರ್ತರನ್ನೂ ಅಣಿಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯಲಿದ್ದೇನೆ. ಭವಿಷ್ಯದಲ್ಲಿಯೂ ನಾನು ನಡೆಯುವ ಹಾದಿಯಲ್ಲಿ ಎಲ್ಲಾದರೂ ಎಡವಿದರೆ, ಅದನ್ನು ತಿದ್ದಿ ತೀಡುವ ಅಧಿಕಾರ ಪಕ್ಷದ ಹಿರಿಯರೆಲ್ಲರಿಗೂ ಇದ್ದೇ ಇದೆ.” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
View this post on Instagram