ನ್ಯೂಸ್ ನಾಟೌಟ್ : ಎರಡು ಬಿಎಂಟಿಸಿ ಬಸ್ ಗಳ ನಡುವೆ ಸಿಲುಕಿ ಆಟೋ ಅಪ್ಪಚ್ಚಿಯಾದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯ ಸೀತಾ ಸರ್ಕಲ್ ಬಳಿ ನಡೆದಿದೆ.
ಮೃತರನ್ನು ಪ್ರಯಾಣಿಕ ವಿಷ್ಣು (80) ಮತ್ತು ಆಟೋ ಚಾಲಕನನ್ನು ಅನಿಲ್ ಕುಮಾರ್ ಎಂದು ಗುರುತಿಸಲಾಗಿದೆ.
ಡಾ.ವಿಷ್ಣು ಗುರುವಾರ(ಫೆ.27) ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಎದುರಿನ ಬಸ್ ಗೆ ಗುದ್ದಿ ಆಟೋದಲ್ಲಿದ್ದ ಇಬ್ಬರು ಕೂಡ ಮೃತಪಟ್ಟಿದ್ದಾರೆ.
ಇಂದಿರಾನಗರ ಡಿಪೋಗೆ ಸೇರಿದ್ದ ಬಸ್ ಇದಾಗಿದ್ದು, ಬಸ್ ಸಂಖ್ಯೆ ಏಂ57ಈ9574 ಎಂದು ತಿಳಿಯಲಾಗಿದೆ. ಸೀತಾ ಸರ್ಕಲ್ ಕಡೆಯಿಂದ ಬರುತ್ತಿದ್ದ ಬಿಎಂಟಿಸಿ ಬಸ್ ಮುಂದೆ ಕಾರು ರಿವರ್ಸ್ ತೆಗೆದುಕೊಳ್ಳುತ್ತಿದ್ದ ಕಾರಣ ನಿಧಾನವಾಗಿ ಚಲಿಸುತ್ತಿತ್ತು. ಈ ವೇಳೆ ಆಟೋ ಬಿಎಂಟಿಸಿ ಬಸ್ ಹಿಂದೆ ನಿಂತಿತು. ಆಗ ವೇಗವಾಗಿ ಬಂದ ಮತ್ತೊಂದು ಬಿಎಂಟಿಸಿ ಬಸ್ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ಎರಡು ಬಸ್‌ಗಳ ನಡುವೆ ಸಿಲುಕಿ ನಜ್ಜುಗುಜ್ಜಾಗಿದೆ. ಬನಶಂಕರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.