ಕರಾವಳಿ

ಒಂದಲ್ಲ ಎರಡಲ್ಲ ಬರೋಬ್ಬರಿ 15 ವರ್ಷದಿಂದ ಈತ ಜೀವಂತ ಶವ..!

238

ನ್ಯೂಸ್ ನಾಟೌಟ್: ಒಂದಲ್ಲ ಎರಡಲ್ಲ ನಿರಂತರ 15 ವರ್ಷದಿಂದ ಯುವಕನೊಬ್ಬ ನಡೆದಾಡಲೂ ಸಾಧ್ಯವಾಗದೆ ಮಲಗಿದಲ್ಲೇ ಇರುವ ಕರುಣಾಜನಕ ಕಥೆ ಸುಳ್ಯ ತಾಲೂಕಿನ ಕನಕಮಜಲಿನಿಂದ ವರದಿಯಾಗಿದೆ.

ಕಳೆದ ಕೆಲವು ವರ್ಷಗಳಿಂದ ಪ್ರತಿ ದಿನವೂ ಆಸ್ಪತ್ರೆಗಳೇ ಈ ಕುಟುಂಬಕ್ಕೆ  ಮನೆಯಾಗಿದೆ. ನಿತ್ಯ ಯಾತನೆ, ನೋವು ಕಣ್ಣೀರು ಈ ಕುಟುಂಬಕ್ಕೆ ಕಟ್ಟಿಟ್ಟ ಬುತ್ತಿಯಾಗಿದೆ. ದುಡಿದು ಸಾಕಬೇಕಿದ್ದ ಮಗ ಮಲಗಿದ್ದಲ್ಲೇ ಆಗಿಬಿಟ್ಟಿದ್ದಾನೆ. ಮಗನ ಪರಿಸ್ಥಿತಿ ಕಂಡು ವೃದ್ಧ ತಾಯಿ, ಪತ್ನಿ, ಮಗಳು ಕಣ್ಣೀರು ಹಾಕುತ್ತಿದ್ದಾರೆ.

ಧನಂಜಯ್ (33) ವರ್ಷ. ಕನಕಮಜಲಿನ ಕಾರಿಂಜದಲ್ಲಿ ಮನೆ. ಸದ್ಯ ಸುಣ್ಣಮೂಲೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ಗಟ್ಟಿಮುಟ್ಟಾದ ಯುವಕ. ಇಡೀ ಕುಟುಂಬವನ್ನು ಸಾಕುತ್ತಿದ್ದ. ಹೀಗಿರುವಾಗ ಒಂದು ದಿನ ಕೊಡಗಿನ ಮಾದಾಪುರಕ್ಕೆ ಯುವಕ ಮರ ಲೋಡ್ ಮಾಡುವ ಕೆಲಸಕ್ಕೆಂದು ಹೋಗಿದ್ದ. ಈ ವೇಳೆ ಮರದ ದಿಮ್ಮಿಯನ್ನು ಎತ್ತಿ ಕೆಳಕ್ಕೆ ಇಡುವ ಸಂದರ್ಭದಲ್ಲಿ ಅವಘಡ ಸಂಭವಿಸಿ ಭಾರಿ ಗಾತ್ರದ ಮರದ ದಿಮ್ಮಿ ಈತನ ಮೈ ಮೇಲೆ ಬಿದ್ದು ಈತ ಈಗ ಜೀವಂತ ಶವವಾಗಿ ಬಿಟ್ಟಿದ್ದಾನೆ. ಬೆನ್ನಿನ ಹುರಿ ಮುರಿದು ಹೋಗಿದೆ. ಲಿವರ್ ಡ್ಯಾಮೇಜ್ ಆಗಿದೆ. ನಿಲ್ಲಲು -ಕೂರಲು ಆಗುತ್ತಿಲ್ಲ. ಸದ್ಯ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರಂಭದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದರೂ ಈಗಿನ ಸ್ಥಿತಿ ಚಿಂತಾಜನಕವಾಗಿದೆ.

ಧನಂಜಯ್ ಅವರು ಇದೀಗ ಉಸಿರಾಟದ ಸಮಸ್ಯೆಗೆ ತುತ್ತಾಗಿದ್ದಾರೆ. ಜತೆಗೆ ಆಪರೇಷನ್ ಆದ ಜಾಗದಲ್ಲಿ ನೋವು ಕಾಣಿಸಿಕೊಂಡಿದೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಅವರ ಸಹೋದರ ಲವ ಕುಮಾರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಲವ ಕುಮಾರ್‌ ಹೇಳಿರುವುದು ಹೀಗೆ, ವಾರಗಳ ಹಿಂದೆ ನನ್ನ ತಮ್ಮನಿಗೆ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ಆತನಿಗಾಗಿ ಕಳೆದ ಕೆಲವು ವರ್ಷಗಳಿಂದ ಲಕ್ಷಾಂತರ ರೂ. ಖರ್ಚು ಮಾಡಿದ್ದೇವೆ. ನನ್ನ ತಾಯಿಗೆ ವಯಸ್ಸಾಗಿದೆ. ಧನಂಜಯ್ ಗೆ ಒಬ್ಬಳು ಮಗಳಿದ್ದು ಎನ್ ಎಂಸಿಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ಧನಂಜಯ್ ಪತ್ನಿ ಹೋಟೆಲ್‌ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಮಗಳ ಫೀಸು , ಪುಸ್ತಕ , ಬಟ್ಟೆಯನ್ನು ನಿರ್ವಹಿಸುತ್ತಿದ್ದಾಳೆ. ನಾನೂ ಕೂಡ ಅವರ ಕುಟುಂಬಕ್ಕೆ ನನ್ನ ಕೈನಿಂದ ಆದ ಸಹಾಯ ಮಾಡುತ್ತಿದ್ದೇನೆ. ಆತನ ವೈದ್ಯಕೀಯ ವೆಚ್ಚಕ್ಕೆ ಹಾಗೂ ಮಗಳ ಶಿಕ್ಷಣಕ್ಕೆ ಯಾರಾದರೂ ನೆರವಾಗಿದ್ದರೆ ತುಂಬಾ ಸಹಾಯವಾಗುತ್ತಿತ್ತು ಮನವಿ ಮಾಡಿದರು.

ನನ್ನ ಮಗಳು ಪಿಯುಸಿ ಓದುತ್ತಿದ್ದಾಳೆ. ನನ್ನ ಪರಿಸ್ಥಿತಿ ಇಂದು ಹೀಗಾಯಿತು. ಆದರೆ ನನ್ನ ಮಗಳ ಮುಂದಿನ ಭವಿಷ್ಯದ ಬಗ್ಗೆಯೇ ನನಗೆ ನಿತ್ಯದ ಯೋಚನೆಯಾಗಿದೆ. ವರ್ಷವೊಂದಕ್ಕೆ ಅವಳಿಗೆ ಸುಮಾರು 30 ಸಾವಿರ ರೂ. ಬೇಕಾಗುತ್ತದೆ. ದೇವರು ನನ್ನನ್ನು ಇಂತಹ ಸ್ಥಿತಿಯಲ್ಲಿ ಹೀಗೆ ಮಲಗಿಸಿಬಿಟ್ಟಿದ್ದಾನೆ ಎಂದು ಧನಂಜಯ್ ವಿಧಿಯನ್ನು ಶಪಿಸುತ್ತಿದ್ದಾರೆ. ಪತ್ನಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಒಂದು ದಿನ ರಜೆ ಮಾಡಿದರೂ ಕೆಲಸಕ್ಕೆ ಬರುವುದು ಬೇಡ ಅನ್ನುತ್ತಾರೆ. ನನ್ನ ಅನಿವಾರ್ಯ ಸ್ಥಿತಿಯಲ್ಲಿ ಕೆಲಸಕ್ಕೆ ಹೋಗದಿದ್ದರೆ ಕೆಲಸ ಹೋಗುತ್ತದೆ. ಮತ್ತೆ ಬೇರೆ ಹೋಟೆಲ್‌ನಲ್ಲಿ ಆಕೆ ಕೆಲಸಕ್ಕೆ ಸೇರಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ನಾನು ಬದುಕಿರುವುದೇ ನನ್ನ ಕುಟುಂಬಕ್ಕೆ ಹೊರ ಎನಿಸುತ್ತಿದೆ ಎಂದು ಧನಂಜಯ್ ನೋವು ತೋಡಿಕೊಂಡರು.

ಮಗನ ಸ್ಥಿತಿ ಕಂಡು ಎಪತ್ತು ವರ್ಷದ ವೃದ್ಧ ತಾಯಿ ಕಣ್ಣೀರುಡುತ್ತಿದ್ದಾರೆ. ನನ್ನನ್ನು ಅವನು ಸಾಕಬೇಕಿತ್ತು. ಆದರೆ ಇಂದಿನ ಆತನ ಸ್ಥಿತಿಯಲ್ಲಿ ಆತನನ್ನು ನಾನೇ ನೋಡಿಕೊಳ್ಳಬೇಕಿದೆ. ನಾನು ಎತ್ತಿ ಆಡಿಸಿದ ಮಗ ಈ ರೀತಿಯಲ್ಲಿ ಮಲಗಿರುವುದನ್ನು ನೋಡುವುದಕ್ಕೆ ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ತಾಯಿ ಕಣ್ಣೀರಾದರು.   

  Ad Widget   Ad Widget   Ad Widget   Ad Widget   Ad Widget   Ad Widget