ನ್ಯೂಸ್ ನಾಟೌಟ್: ‘ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು’ ಎಂದು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವ ನಟ ಕಮಲ ಹಾಸನ್ ಅವರಿಗೆ ಇದೀಗ ಬ್ಯಾನ್ ಬಿಸಿ ಎದುರಾಗಿದೆ. ತಪ್ಪೇ ಮಾಡಿಲ್ಲ, ಕ್ಷಮೆ ಕೇಳಲ್ಲ ಎಂದು ಪಟ್ಟು ಹಿಡಿದಿರೋ ಕಮಲ್ ಹಾಸನ್ ಗೆ ತಕ್ಕ ಪಾಠ ಕಲಿಸಲು ಕನ್ನಡಪರ ಸಂಘಟನೆ ಮುಂದಾಗಿದೆ.
ಜೂನ್ 5ರಂದು ಅವರು ಅಭಿನಯಿಸಿರೋ ‘ಥಗ್ ಲೈಫ್’ ಚಿತ್ರ ರಿಲೀಸ್ ಗೆ ಸಿದ್ಧವಾಗಿದೆ. ಇಷ್ಟರಲ್ಲೇ ಕನ್ನಡಿಗರಿಗೆ ಕ್ಷಮೆಯಾಚಿಸಲು ಕಮಲ್ ಹಾಸನ್ ಗೆ ಕೊಟ್ಟ ಗಡುವು ಮುಗಿದಿದೆ. ಕರ್ನಾಟಕದಲ್ಲಿ 100ಕ್ಕೂ ಹೆಚ್ಚು ಸ್ಕ್ರಿನ್ ಗಳಲ್ಲಿ ರಿಲೀಸ್ ಗೆ ರೆಡಿಯಿರುವ ‘ಥಗ್ ಲೈಫ್’ (Thug Life) ಚಿತ್ರ ಪ್ರದರ್ಶನ ಮಾಡದಂತೆ ಥಿಯೇಟರ್‌ಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರ ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಒಂದು ವೇಳೆ ಚಿತ್ರ ಪ್ರದರ್ಶನಕ್ಕೆ ಮುಂದಾದರೆ ಥಿಯೇಟರ್‌ಗೆ ಬೆಂಕಿ ಹಚ್ಚೋದಾಗಿ ಎಚ್ಚರಿಕೆ ನೀಡಿವೆ.
ಕಮಲ್ ನಟನೆ, ನಿರ್ಮಾಣದ ‘ಥಗ್ ಲೈಫ್’ ಚಿತ್ರದ ಹಂಚಿಕೆಯ ಹಕ್ಕನ್ನು ಪಡೆದಿದ್ದ ವೆಂಕಟೇಶ್ ಹಣ ವಾಪಸ್ ಕೊಡಲು ಮುಂದಾಗಿದ್ದಾರೆ. ರಿಲೀಸ್ ಗೆ ಅಡ್ಡಿಯಾದ್ರೂ ಪರ್ವಾಗಿಲ್ಲ ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದ ಕಮಲ್ ಈಗಲಾದ್ರು ತಪ್ಪು ಅರಿತು ಕ್ಷಮೆಯಾಚಿಸುತ್ತಾರಾ ಎಂದು ಕಾದುನೋಡಬೇಕಿದೆ.ನಿನ್ನೆ (ಮೇ 30) ಚೆನ್ನೈನಲ್ಲಿ ಕಮಲ್ ಹಾಸನ್ ಮಾತನಾಡಿ, ಕ್ಷಮೆ ಕೇಳಲ್ಲ ಎಂದು ಹೇಳಿ ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದು ಪ್ರಜಾಪ್ರಭುತ್ವ. ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿನ ನನ್ನ ಪ್ರೀತಿ ನಿಜ. ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನನ್ನಿಂದ ತಪ್ಪಾಗಿದ್ರೆ ಕ್ಷಮೆ ಕೇಳುವೆ, ನನ್ನಿಂದ ತಪ್ಪು ಆಗಿಲ್ಲ. ನನ್ನ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದರು.ಯಾವುದೇ ಬೆದರಿಕೆ, ಎಚ್ಚರಿಕೆಗೆ ನಾನು ಹೆದರುವುದಿಲ್ಲ. ಕಾನೂನು ಹಾಗೂ ನ್ಯಾಯದ ಮೇಲೆ ನಂಬಿಕೆ ಇಟ್ಟಿದ್ದೇನೆ ಎಂದಿದ್ದರು.