ನ್ಯೂಸ್ ನಾಟೌಟ್: ಮಳೆಗಾಲದಲ್ಲಿ ಕೆಲಸವಿಲ್ಲದೆ ಕುಳಿತಿರುವ ಕಳ್ಳರ ಹಾವಳಿ ಸಂಪಾಜೆಯ ಕಲ್ಲುಗುಂಡಿ ಭಾಗದಲ್ಲಿ ಜೋರಾಗಿದೆ.
ಈ ಕಳ್ಳರಿಗೆ ಯಾವುದೇ ಕಾನೂನಿನ ಭಯವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ತಮಗೆ ಬೇಕಾದ ಸ್ಥಳಗಳನ್ನು ಆಯ್ದುಕೊಳ್ಳುತ್ತಿದ್ದಾರೆ, ರಾಜಾರೋಷವಾಗಿ ಅಲ್ಲಿಗೆ ತೆರಳಿ ಕದಿಯುತ್ತಿದ್ದಾರೆ. ಯಾವ ಪೊಲೀಸರ ಭಯವೂ ಇಲ್ಲದಂತಾಗಿರುವುದು ವಿಪರ್ಯಾಸವೇ ಸರಿ.
ಕೆಲವು ದಿನಗಳ ಹಿಂದೆ ಬಡ ಮಹಿಳೆಯ ಹೋಟೆಲ್ ನಿಂದ ಸಾವಿರಾರು ರೂ. ಮೌಲ್ಯದ ಮಣ್ಣಿನ ಮಡಿಕೆ ಕದ್ದು ಹೋಗಿತ್ತು. ಕಬ್ಬಿಣ ಕಳ್ಳತನದ ಬಗ್ಗೆ ವರದಿಯಾಗಿದೆ. ಮನೆಯ ಎದುರು ನಿಲ್ಲಿಸಿದ ರಿಕ್ಷಾವನ್ನೂ ಕದಿಯಲು ಯತ್ನಿಸಿದ್ದರು. ಇದೀಗ ಕಲ್ಲುಗುಂಡಿಯ ಸಮೀಪದಲ್ಲಿ ವೆಲ್ಡಿಂಗ್ ಶಾಪ್ ನಲ್ಲಿ ರಮೇಶ್ ಹುಲ್ಲುಬೆಂಕಿಯವರಿಗೆ ಸೇರಿದ ಶಾಪ್ ನಿಂದ ಜು.19ರಂದು ಬೆಳ್ ಬೆಳಗ್ಗೆ ಜನರೇಟರ್ ಕಳ್ಳತನವಾಗಿದೆ. ಸುಮಾರು 50 ಸಾವಿರಕ್ಕೂ ಅಧಿಕ ಮೌಲ್ಯದ ಜನರೇಟರ್ ಅನ್ನು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಕಳ್ಳರು ಕದ್ದಿದ್ದಾರೆ. ಕಳ್ಳರಿಗೆ ಇದು ಕೇವಲ ಕಳ್ಳಾಟವಷ್ಟೇ, ಆದರೆ ಸಂಪಾಜೆಯ ಜನರಿಗೆ ಇದು ತೀವ್ರ ಆತಂಕದ ವಿಚಾರ. ಕಳ್ಳರ ಕೈ ಕೆಲಸಕ್ಕೆ ಹೆದರಿದ ಜನ ಸದ್ಯ ಮನೆ ಬಿಟ್ಟು ಬೇರೆಲ್ಲೂ ಹೋಗುವ ಸ್ಥಿತಿಯಲ್ಲಿಲ್ಲ. ಮಲಗಿದ್ದಾಗ ಯಾವಾಗ ಏನು ಕದಿಯುತ್ತಾರೆ ಅನ್ನುವುದೇ ಗೊತ್ತಾಗುತ್ತಿಲ್ಲ ಎಂದು ಸ್ಥಳೀಯರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಜನರೇಟರ್ ಕಳವು
ಕಲ್ಲುಗುಂಡಿಯ ಬಂಗ್ಲೆಗುಡ್ಡೆ ಸಮೀಪ ವೆಲ್ಡಿಂಗ್ ವರ್ಕ್ ಮಾಡುತ್ತಿರುವ ರಮೇಶ್ ಹುಲ್ಲು ಬೆಂಕಿ ಅನ್ನುವವರಿಗೆ ಸೇರಿದ ಜನರೇಟರ್ ಅನ್ನು ಕಳ್ಳರು ಹೊಂಚು ಹಾಕಿ ಶನಿವಾರ ಬೆಳ್ ಬೆಳಗ್ಗೆ ಕದ್ದು ಪರಾರಿಯಾಗಿದ್ದಾರೆ. ತಡ ರಾತ್ರಿ 12 ಗಂಟೆ ತನಕ ನೌಕರರು ವೆಲ್ಡಿಂಗ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದರು. ತದನಂತರ ಕಳ್ಳತನ ನಡೆದಿದೆ ಎಂದು ಹೇಳಲಾಗಿದೆ. ಬೆಳಗ್ಗೆ ಶಾಪ್ ಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ರಮೇಶ್ ಹುಲ್ಲು ಬೆಂಕಿಯವರ ಗಮನಕ್ಕೆ ಬಂದಿದೆ. ರಾತ್ರಿ ಪಿಕಪ್ ನ ಡೋರ್ ತೆಗೆದ ಸದ್ದಾಗಿದ್ದು ಕೇಳಿದೆ ಎಂದು ಸ್ಥಳೀಯರೊಬ್ಬರು ಹೇಳಿರುವುದರಿಂದ ವೃತ್ತಿಪರ ಕಲ್ಲುಗುಂಡಿಯ ಸ್ಥಳೀಯ ವ್ಯಕ್ತಿಗಳ ಕೈವಾಡದ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಕೆಲವು ದಿನಗಳ ಹಿಂದೆ ಸಂಪಾಜೆಯ ಕೈಪಡ್ಕ ಎಂಬಲ್ಲಿ ವ್ಯಕ್ತಿಯೊಬ್ಬರಿಗೆ ಸೇರಿದ ಆಟೋ ರಿಕ್ಷಾವನ್ನು ಕದಿಯಲು ಕಳ್ಳರು ಯತ್ನಿಸಿದ್ದಾರೆ.