ಕರಾವಳಿ

ಸಂಪಾಜೆ: ಕುಸಿಯುವ ಭೀತಿಯಲ್ಲಿ ಬಡವರ ಮನೆಗಳು

ನ್ಯೂಸ್ ನಾಟೌಟ್: ಕಳೆದ ಕೆಲವು ದಿನಗಳಿಂದ ಭೂಕಂಪ, ಭೂಕುಸಿತ, ನೆರೆ ವಿಚಾರಗಳಿಂದ ಸುದ್ದಿಯಾಗಿದ್ದ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇದೀಗ ಮನೆ ಕುಸಿದು ಬೀಳುವ ಆತಂಕ ಎದುರಾಗಿದೆ. ಬಿಪಿಎಲ್ ಕಾರ್ಡ್ ಹಿನ್ನೆಲೆಯಲ್ಲಿರುವ ಬಡವರ ಮನೆಗಳೇ ಈಗ ಕುಸಿತದ  ಭೀತಿಯಲ್ಲಿದ್ದು ಮುಂದಿನ ದಾರಿ ತೋಚದೆ ಮನೆ ಮಂದಿ ಕಂಗಾಲಾಗಿದ್ದಾರೆ.

ಕಲ್ಲುಗುಂಡಿಯ ಕೂಲಿಶೆಡ್ ನಲ್ಲಿರುವ ಮೂಸನ್ ಅನ್ನುವ ಮನೆಯ ಹಿಂದಿನ ಬರೆ ಸರಣಿ ಭೂಕಂಪಕ್ಕೆ ಸಿಲುಕಿ ಸ್ವಲ್ಪ ಸ್ವಲ್ಪವೇ ಕುಸಿದು ಇದೀಗ ಮನೆಯೇ ಬರೆಯಿಂದ ಕೆಳಕ್ಕೆ ಬೀಳುವ ಸ್ಥಿತಿ ಎದುರಾಗಿದೆ. ಈ ಬಗ್ಗೆ ನ್ಯೂಸ್ ನಾಟೌಟ್ ಜತೆಗೆ ಮಾತನಾಡಿದ ಮೂಸನ್, ನಮ್ಮ ಮನೆಯ ಹಿಂಬದಿಯಲ್ಲಿನ ಬರೆ ಜರಿದು ನಾವು ಮನೆ ಬಿಡಬೇಕಾದ ಪರಿಸ್ಥಿತಿ ಇದೆ. ಯಾವ ಕ್ಷಣ ಬೇಕಾದರೂ ಇದು ಜರಿದು ಹೋಗಬಹುದು. ಸರಕಾರ ನಮ್ಮ ಮನೆಯನ್ನು ಉಳಿಸಿಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಮೂಸನ್ ಅನ್ನುವ ವ್ಯಕ್ತಿಯ ಮನೆ ಹಿಂಬದಿಯ ಬರೆ ಜರಿಯುತ್ತಿದೆ. ಮನೆ ಜರಿದು ಬೀಳುವ ಆತಂಕದಲ್ಲಿದೆ.

ಗೂನಡ್ಕದಲ್ಲಿರುವ ಸಾವಿತ್ರಿ ಎಂಬ ದಲಿತ ಮಹಿಳೆಯ ಮನೆಯ ಹಿಂಭಾಗದ ಬರೆ ಕುಸಿದು ಇದೀಗ ಪೌಂಡೆಶನ್ ಸಹಿತ ಮನೆಯ ಹಿಂಬದಿ ಜರಿದು ಬೀಳುವ ಸ್ಥಿತಿಯಲ್ಲಿದೆ. ಸದ್ಯ ಅವರು ಗಂಜಿ ಕೇಂದ್ರಕ್ಕೆ ಹೋಗಲು ಇಷ್ಟವಿಲ್ಲದೆ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದಾರೆ. ಆದರೆ ಕಷ್ಟಪಟ್ಟು ಕಟ್ಟಿದ ಮನೆ ಕುಸಿದು ಬಿದ್ದರೆ ಮುಂದೆ ಏನು ಮಾಡುವುದು ಅನ್ನುವ ಚಿಂತೆ ಅವರನ್ನು ಪ್ರತಿ ದಿನ ಪ್ರತಿ ಕ್ಷಣವೂ ಕಾಡುತ್ತಿದೆ. ಈ ಬಗ್ಗೆ ನ್ಯೂಸ್ ನಾಟೌಟ್  ಗೆ ಪ್ರತಿಕ್ರಿಯಿಸಿದ ಸಾವಿತ್ರಿ ಮುಂದೆ ಏನು ಮಾಡಬೇಕು ಅನ್ನುವುದೇ ನಮಗೆ ತಿಳಿಯುತ್ತಿಲ್ಲ. ಬರೆ ಹೀಗೆ ಜರಿದುಕೊಂಡು ಹೋದರೆ ನಮ್ಮ ಮನೆ ಉಳಿಯುವುದಿಲ್ಲ. ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಗೂನಡ್ಕದ ಸಾವಿತ್ರಿ ಅವರ ಮನೆಯ ಹಿಂಬದಿ ಜರಿಯುತ್ತಿರುವುದು.

ಉಳಿದಂತೆ ಗೂನಡ್ಕದ ದರ್ಕಾಸ್ ನಲ್ಲಿ ಬಶೀರ್ ಅನ್ನುವವರ ಮನೆ ಕೂಡ ಕುಸಿತದ ಭೀತಿಯಲ್ಲಿದ್ದು ಅಲ್ಲಲ್ಲಿ ಬಿರುಕು ಬಿಟ್ಟಿದೆ. ಸದ್ಯ ಅವರು ಮನೆ ಖಾಲಿ ಮಾಡಿದ್ದಾರೆ.

ಗೂನಡ್ಕ ದರ್ಕಾಸ್ ನಲ್ಲಿ ಬಶೀರ್ ಮನೆ ಕುಸಿತದ ಹಂತದಲ್ಲಿರುವುದು

ಬಡವರ ಮನೆಗಳು ಮಳೆಗಾಲದಲ್ಲಿ ಇಂತಹ ಸ್ಥಿತಿಗೆ ಬಂದು ತಲುಪಿರುವುದರಿಂದ ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದಂತಾಗಿದೆ. ನಾವು ಪಂಚಾಯತ್ ವತಿಯಿಂದ ಶಕ್ತಿ ಮೀರಿ ನೆರವು ನೀಡಿದ್ದೇವೆ. ಇವರಿಗೆ ಶಾಶ್ವತವಾಗಿ ಪರಿಹಾರ ನೀಡುವ ಕೆಲಸ ಸರಕಾರದಿಂದ ಆಗಬೇಕಿದೆ.

ಎಸ್ ಕೆ. ಹನೀಫ್, ಗ್ರಾಂ.ಪಂ.ಸದಸ್ಯ, ಸಂಪಾಜೆ

Related posts

ಬೆಳ್ತಂಗಡಿಯಲ್ಲಿ ಒಂಟಿ ಮಹಿಳೆಯ ಕೈಕಾಲು ಕಟ್ಟಿಹಾಕಿ ದರೋಡೆ

ಜಾಲ್ಸೂರು:ಬಸ್‌ ಸ್ಟ್ಯಾಂಡ್‌ನಲ್ಲಿ ಅನಾಥ ಶವ ಪತ್ತೆ!!

ಮಡಿಕೇರಿ:ಭೀಕರ ರಸ್ತೆ ಅಪಘಾತ-ಬೈಕ್ ಸವಾರ ಸ್ಥಳದಲ್ಲೇ ಮೃತ್ಯು