ನ್ಯೂಸ್ ನಾಟೌಟ್: ಕಡಬ ತಾಲೂಕಿನ ಆಲಂಕಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೂವಿನ ಕುಂಡ ಸೇರಿದಂತೆ ಶಾಲೆಯ ಸೊತ್ತುಗಳನ್ನು ವಿದ್ಯಾರ್ಥಿಗಳೇ ಧ್ವಂಸಗೊಳಿಸಿದ ಘಟನೆ ಬಗ್ಗೆ ವರದಿಯಾಗಿದೆ. ಫೆ.26 ರಂದು ಮಹಾಶಿವರಾತ್ರಿಯ ಸಂದರ್ಭದಲ್ಲಿ ಹಗಲು ವೇಳೆ ಈ ಘಟನೆ ನಡೆದಿದೆ.
ಶಾಲೆಯ ಹೂವಿನ ಕುಂಡ, ಹೂವಿನ ಗಿಡಗಳು ಮತ್ತು ವಾಲಿಬಾಲ್ ನೆಟ್ ಅನ್ನು ಹಾನಿಗೊಳಿಸಿದ್ದು, ಕಸದ ಬುಟ್ಟಿಯಲ್ಲಿದ್ದ ಕಸವನ್ನು ಚೆಲ್ಲಾಪಿಲ್ಲಿ ಮಾಡಿ, ಪಪ್ಪಾಯಿ ಗಿಡವನ್ನು ಮುರಿದು ಹಾಕಿದ್ದಾರೆ.ಶಾಲೆಯ ಸೂಚನಾ ಫಲಕವನ್ನೂ ಹಾನಿ ಮಾಡಲಾಗಿದೆ. ಜೊತೆಗೆ ಶಾಲಾ ಆವರಣದಲ್ಲಿನ ಬಾಳೆ ಮರದ ಗೊನೆಯನ್ನು ಕತ್ತರಿಸಿ ಶಾಲಾ ಆವರಣದಲ್ಲಿ ಎಸೆದು ಬಾಳೆಕಾಯಿಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರ ಎಂದು ತಿಳಿದು ಬಂದಿದೆ.
ಅದಲ್ಲದೇ ಶಾಲೆಯ ಶೌಚಾಲಯದ ಟ್ಯಾಪ್ ಅನ್ನು ಕೂಡ ಮುರಿದಿದ್ದಾರೆ.ರಜೆಯ ದಿನವಾಗಿದ್ದರೂ, ಮುಖ್ಯೋಪಾಧ್ಯಾಯರು ಮಧ್ಯಾಹ್ನದವರೆಗೆ ಶಾಲೆಯಲ್ಲಿ ಇದ್ದು, ನಂತರ ಕೆಲಸದ ನಿಮಿತ್ತ ಪುತ್ತೂರಿಗೆ ತೆರಳಿದ್ದರು. ಈ ವೇಳೆ ಈ ಕೃತ್ಯ ನಡೆದಿದೆ. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಸದಸ್ಯರು, ಶಿಕ್ಷಕರು ಮತ್ತು ಗ್ರಾಮಸ್ಥರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.