ನ್ಯೂಸ್ ನಾಟೌಟ್: ಬ್ರಿಟಿಷರ ವಿರುದ್ಧ ಹೋರಾಡಿ ಗಲ್ಲಿಗೇರಿ ವೀರ ಮರಣವನ್ನು ಅಪ್ಪಿದ ಉಪ್ಪಿನಂಗಡಿ ಮಂಜ ಬೈದ್ಯನ ನೆನಪಿಗೆ ಒಂದು ಪ್ರತಿಮೆ ಅಥವಾ ರಸ್ತೆ ಬಿಡಿ ಒಂದು ಸ್ಮಾರಕ ಕಂಬವೂ ಇಲ್ಲ ಎಂಬ ಕೂಗು ಕೇಳಿ ಬರುತ್ತಿತ್ತು.ಇದೀಗ ಸ್ವಾತಂತ್ರ್ಯ ಯೋಧ ಉಪ್ಪಿನಂಗಡಿ ನಿವಾಸಿ ಮಂಜ ಬೈದ್ಯ ಅವರ ಹೆಸರು ಉಪ್ಪಿನಂಗಡಿ ಮುಖ್ಯ ರಸ್ತೆಗೆ ನಾಮಕರಣ ಮಾಡುವುದರ ಮೂಲಕ ಅವರ ನೆನಪು ಶಾಶ್ವತವಾಗಿರಲಿದೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ವಿಷಯ ತಿಳಿಸಿದ ಶಾಸಕ ಅಶೋಕ್ ಕುಮಾರ್ ರೈ ” ಇಂದಿನ ಪೀಳಿಗೆಗೆ ಉಪ್ಪಿನಂಗಡಿ ಮಂಜ ಬೈದ್ಯನಂತಹ ಹೋರಾಟಗಾರರ ಪರಿಚಯವಾಗುವ ನಿಟ್ಟಿನಲ್ಲಿ ಅವರನ್ನು ವಿಶೇಷ ರೀತಿಯಲ್ಲಿ ಗೌರವಿಸುವ ಕೆಲಸವಾಗಬೇಕಿದೆ. ಈ ನೆಲೆಯಲ್ಲಿ ಗೆಜ್ಜೆಗಿರಿ ಯಲ್ಲಿ ಅವರ ಪ್ರತಿಮೆ ಅನಾವರಣ ಗೊಳಿಸಲಾಗುವುದು. ಆ ಮೂಲಕ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ತಾಲೂಕಿನ ಬಿಲ್ಲವ ಸಮುದಾಯದ ಮಂಜ ಬೈದ್ಯರ ತ್ಯಾಗ ವನ್ನು ಸ್ಮರಿಸಲಾಗುವುದು.ದೇಶದ ಸ್ವಾತ್ರಂತ್ಯ್ರಕ್ಕೆ ಹೋರಾಟ ನಡೆಸಿದ ಮಂಜ ಬೈದ್ಯನ ತ್ಯಾಗ ಮತ್ತು ಬಲಿದಾನವನ್ನು ನಾವು ಸ್ಮರಿಸುವ ಸಲುವಾಗಿ ಉಪ್ಪಿನಂಗಡಿಯ ಮುಖ್ಯ ರಸ್ತೆಗೆ ನಾಮಕರಣ ಮಾಡಲಾಗುವುದು ಹೇಳಿದರು.
ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಯೋಧ ಮಂಜ ಬೈದ್ಯ ಅವರನ್ನು 1837 ಮೇ. 27 ರಂದು ಬ್ರಿಟಿಷರು ಗಲ್ಲಿಗೇರಿಸಿದ್ದರು.ಬಳಿಕ ಮಂಜ ಬೈದ್ಯರ ಶರೀರ ಕೊಳೆತು ಹೋಗುವ ತನಕ ಗಲ್ಲುಗಂಬದಿಂದ ಕೆಳಗಿಳಿಸದೇ ಬ್ರಿಟಿಷರು ಕ್ರೌರ್ಯ ಮೆರೆದಿದ್ದರು.