ಕ್ರೈಂವೈರಲ್ ನ್ಯೂಸ್

ಆಕಸ್ಮಿಕವಾಗಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್..! ಹಿಂದಿರುಗಿಸಲು ನಿರಾಕರಿಸಿದರೇ ದೇವಸ್ಥಾನದ ಸಿಬ್ಬಂದಿ..?

ನ್ಯೂಸ್ ನಾಟೌಟ್: ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ, ಆಕಸ್ಮಿಕವಾಗಿ ಹುಂಡಿಗೆ ಬಿದ್ದಿದ್ದ ಭಕ್ತರೊಬ್ಬರ ಐಫೋನ್ ಅನ್ನು ಮರಳಿಸಲು ದೇವಸ್ಥಾನದ ಸಿಬ್ಬಂದಿ ನಿರಾಕರಿಸಿರುವ ಘಟನೆ ಚೆನ್ನೈನ ತಿರುಪೊರೂರ್ ಬಳಿಯ ಅರುಳ್ ಮಿಗು ಕಂದಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.

ವಿನಾಯಗಪುರಂ ನಿವಾಸಿಯಾದ ದಿನೇಶ್ ಎಂಬುವವರು ಅರುಳ್ ಮಿಗು ಕಂದಸ್ವಾಮಿ ದೇವಸ್ಥಾನಕ್ಕೆ ಕಳೆದ ತಿಂಗಳು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ, ಹುಂಡಿಗೆ ಕಾಣಿಕೆ ಹಾಕಲು ದುಡ್ಡನ್ನು ಜೇಬಿನಿಂದ ಹೊರ ತೆಗೆಯುವಾಗ ಅವರ ಐಫೋನ್ ಆಕಸ್ಮಿಕವಾಗಿ ಹುಂಡಿ(ಕಾಣಿಕೆ ಡಬ್ಬಿ)ಗೆ ಬಿದ್ದಿತ್ತು. ಈ ಸಂಗತಿಯನ್ನು ಅವರು ದೇವಸ್ಥಾನದ ಸಿಬ್ಬಂದಿಗಳ ಗಮನಕ್ಕೆ ತಂದಿದ್ದಾರೆ. ಆದರೆ, ಹುಂಡಿಗೆ ಬಿದ್ದಿದ್ದ ಐಫೋನ್ ಅನ್ನು ಮರಳಿಸಲು ನಿರಾಕರಿಸಿರುವ ದೇವಸ್ಥಾನದ ಸಿಬ್ಬಂದಿ, “ಅದು ದೇವರ ಸ್ವತ್ತು” ಎಂದು ಅವರ ಮನವಿಯನ್ನು ತಳ್ಳಿ ಹಾಕಿದ್ದಾರೆ. ಇದರೊಂದಿಗೆ, ಸಂಪ್ರದಾಯದ ಪ್ರಕಾರ, ಎರಡು ತಿಂಗಳಿಗೆ ಒಮ್ಮೆ ಮಾತ್ರ ಹುಂಡಿಯನ್ನು ತೆರೆಯಲಾಗುತ್ತದೆ ಎಂದು ಅವರು ಸಮಜಾಯಿಷಿ ನೀಡಿದ್ದಾರೆ ಎನ್ನಲಾಗಿದೆ.

ಇದರ ಬೆನ್ನಿಗೇ, ದಿನೇಶ್ ಅವರು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ದೂರು ದಾಖಲಿಸಿದ್ದು, ಹುಂಡಿಯನ್ನು ತೆರೆಯುವಂತೆ ದೇವಸ್ಥಾನದ ಸಿಬ್ಬಂದಿಗೆ ಸೂಚನೆ ನೀಡಿ ಎಂದು ಮನವಿ ಮಾಡಿದ್ದಾರೆ.

ಶುಕ್ರವಾರ(ಡಿ.20), ದೇವಸ್ಥಾನದ ಸಿಬ್ಬಂದಿಗಳು ಹುಂಡಿಯನ್ನು ತೆರೆದಿದ್ದಾರೆ. ಕೂಡಲೇ ದಿನೇಶ್ ತಮ್ಮ ಐಫೋನ್ ಅನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆದರೆ, ದೇವಸ್ಥಾನದ ಸಿಬ್ಬಂದಿ ಅದಕ್ಕೆ ಅವಕಾಶ ನಿರಾಕರಿಸಿದ್ದು, ಐಫೋನ್ ನಲ್ಲಿರುವ ಸಿಮ್ ಕಾರ್ಡ್ ಅನ್ನು ತೆಗೆದುಕೊಂಡು, ಐಫೋನ್ ನಲ್ಲಿರುವ ಮುಖ್ಯ ದತ್ತಾಂಶಗಳನ್ನು ನಕಲು ಮಾಡಿಕೊಳ್ಳುವ ಆಯ್ಕೆ ನೀಡಿದ್ದಾರೆ ಎನ್ನಲಾಗಿದೆ.

ಆದರೆ, ಅದಾಗಲೇ ಹೊಸ ಸಿಮ್ ಖರೀದಿಸಿದ್ದ ದಿನೇಶ್, ತಮ್ಮ ಫೋನ್ ಅನ್ನು ಮರಳಿಸುವ ಆಯ್ಕೆಯನ್ನು ದೇವಸ್ಥಾನದ ಸಿಬ್ಬಂದಿಗಳಿಗೇ ನೀಡಿ, ಅಲ್ಲಿಂದ ಬರಿಗೈನಲ್ಲಿ ಮನೆಗೆ ಮರಳಿದ್ದಾರೆ.
ಈ ಘಟನೆಯ ಕುರಿತು ಶನಿವಾರ ಪ್ರತಿಕ್ರಿಯಿಸಿರುವ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಸಚಿವ ಪಿ.ಕೆ.ಶೇಖರ್ ಬಾಬು, ಕಾಣಿಕೆ ಡಬ್ಬಿಗೆ ಏನನ್ನೇ ಅರ್ಪಿಸಿದರೂ, ಒಂದೊಮ್ಮೆ ಅದು ಅಪರಾಧ ಕೃತ್ಯವೇ ಆಗಿದ್ದರೂ, ಅಂತಹ ವಸ್ತುಗಳು ದೇವರ ಖಾತೆಗೆ ಜಮೆಯಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

“ದೇವಸ್ಥಾನಗಳಲ್ಲಿನ ರೂಢಿ ಹಾಗೂ ಸಂಪ್ರದಾಯದಂತೆ, ಹುಂಡಿಗೆ ಹಾಕಿದ ಕಾಣಿಕೆಯು ನೇರವಾಗಿ ದೇವಸ್ಥಾನದ ದೇವರ ಖಾತೆಗೆ ಹೋಗುತ್ತದೆ. ದೇವಸ್ಥಾನದ ಆಡಳಿತ ಮಂಡಳಿಯು ಭಕ್ತರಿಗೆ ಕಾಣಿಕೆಯನ್ನು ಹಿಂದಿರುಗಿಸಲು ನಿಯಮಗಳು ಅವಕಾಶ ನೀಡುವುದಿಲ್ಲ” ಎಂದು ಸಚಿವರು ತಿಳಿಸಿದ್ದಾರೆ.
ಈ ಕುರಿತು ಅಧಿಕಾರಿಗಳೊಂದಿಗೆ ಪರ್ಯಾಯ ಮಾರ್ಗಗಳೇನಾದರೂ ಇವೆಯೆ ಎಂದು ಚರ್ಚಿಸಲಾಗುವುದು. ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದೂ ಅವರು ಭರವಸೆ ನೀಡಿದ್ದಾರೆ.

Click

Related posts

ನಟಿ ಅಮೂಲ್ಯ ಸಹೋದರ, ಚಿತ್ರ ನಿರ್ದೇಶಕ ದೀಪಕ್ ಅರಸ್ ನಿಧನ..! ಚಿಕಿತ್ಸೆ ಫಲಕಾರಿಯಾಗದೆ ಸಾವು..!

ರಾಕಿಂಗ್‌ ಸ್ಟಾರ್‌ ಜೊತೆ ಮಿಂಚಲಿರುವ ಬಾಲಿವುಡ್‌ ನಟಿ..! ಲೇಡಿ ಸೂಪರ್‌ಸ್ಟಾರ್‌ ನಯನತಾರಾ ಸೇರಿದಂತೆ ಹಲವು ನಟಿಯರು ‘ಟಾಕ್ಸಿಕ್‌’ ನಲ್ಲಿ ಭಾಗಿ..!

ಪುತ್ತೂರು: ಶಾಸಕ ಮಠಂದೂರು ಬಸ್ ತಡೆದು ಹಿಂದೂ ಕಾರ್ಯಕರ್ತರ ಆಕ್ರೋಶ