ನ್ಯೂಸ್ ನಾಟೌಟ್: ಕೆಲವೊಂದು ಜಾಹೀರಾತುಗಳು ಹೇಗೆ ಜನರನ್ನು ಮರುಳು ಮಾಡುತ್ತವೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಪ್ರಸ್ತುತ ಹಣಕಾಸಿನ ವಿಚಾರದಲ್ಲಿ ಎಷ್ಟು ಜಾಗ್ರತೆ ವಹಿಸಿದರೂ ವಂಚಕರು ನಯವಾಗಿ ಮುಗ್ದ ಜನರನ್ನು ವಂಚಿಸುವಲ್ಲಿ ಯಶಸ್ವಿಯಾಗುತ್ತಾರೆ. ಇಂಥದೊಂದು ಘಟನೆ ಮುಂಬೈನಲ್ಲಿ ನಡೆದಿದೆ.
ಇಲ್ಲಿನ ಸಾಂತಾಕ್ರೂಜ್ ನಿವಾಸಿ, ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಯ ಕ್ಯಾಷಿಯರ್ ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ 10.38 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ಮುಂಬೈನ ಪಶ್ಚಿಮ ಪ್ರದೇಶ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಮಾ ಸಂಸ್ಥೆಯ ಚರ್ಚ್‌ಗೇಟ್ ಶಾಖೆಯಲ್ಲಿ ಕೆಲಸ ಮಾಡುವ ಸಂತ್ರಸ್ತ, ಫೆಬ್ರವರಿ 23ರಂದು ಸಾಮಾಜಿಕ ಜಾಲತಾಣದಲ್ಲಿ ರೀಲ್‌ಗಳನ್ನು ವೀಕ್ಷಿಸುತ್ತಿದ್ದಾಗ ಜಾಹೀರಾತು ಒಂದನ್ನು ನೋಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಒಂದು ರೂಪಾಯಿ ನೋಟು ಇದ್ದರೆ 4.53 ಲಕ್ಷ ರೂ. ಬಹುಮಾನ ನೀಡುವುದಾಗಿ ಜಾಹೀರಾತು ಭರವಸೆ ನೀಡಿತ್ತು. ಅದರಲ್ಲಿ ವಾಟ್ಸಾಪ್ ಸಂಖ್ಯೆ ಕೂಡ ಇತ್ತು ಎಂದು ಸಂತ್ರಸ್ತ ದೂರಿನಲ್ಲಿ ತಿಳಿಸಿದ್ದಾರೆ.
ಸಂತ್ರಸ್ತ, ವಾಟ್ಸಾಪ್ ಸಂಖ್ಯೆಗೆ 1 ರೂಪಾಯಿ ನೋಟಿನ ಫೋಟೋ ಕಳುಹಿಸಿದ್ದಾರೆ. ಇದಾದ ನಂತರ ಪಂಕಜ್ ಸಿಂಗ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರು ಅವನನ್ನು ಸಂಪರ್ಕಿಸಿ, ತಾನು ನಾಣ್ಯದ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾನೆ. ಫಾರ್ಮ್ ಭರ್ತಿ ಮಾಡಲು ಕೇಳಿ, ನೋಂದಣಿಗಾಗಿ 6,160 ರೂ.ಗಳನ್ನು ಸಂಗ್ರಹಿಸಿದ್ದಾನೆ. ಸ್ವಲ್ಪ ಸಮಯದ ನಂತರ ಆತ ಮತ್ತೆ ದೂರುದಾರರಿಗೆ ಕರೆ ಮಾಡಿ, ಹಿಂದಿನ ಮೊತ್ತ ತಪ್ಪಾಗಿದೆ ಮತ್ತು 6,107 ರೂ.ಗಳನ್ನು ಮತ್ತೆ ವರ್ಗಾಯಿಸಬೇಕಾಗುತ್ತದೆ ಹೇಳಿದ್ದಾನೆ. ಬಳಿಕ ಸಂತ್ರಸ್ತ ಹಣ ವರ್ಗಾಯಿಸಿದ್ದಾರೆ.
ಇದಾದ ನಂತರ, ಸಿಂಗ್ ಎಂಬಾತ ಅರುಣ್ ಶರ್ಮ ಹೆಸರಿನ ಮತ್ತೊಬ್ಬ ವ್ಯಕ್ತಿಯನ್ನು ಸಂತ್ರಸ್ತನಿಗೆ ಪರಿಚಯಿಸಿದ್ದಾನೆ. ಬಳಿಕ ಶರ್ಮ, ಸಂತ್ರಸ್ತನಿಗೆ “RBI” ಯಿಂದ ಒಂದು ರೂಪಾಯಿ ನೋಟಿಗೆ ಬದಲಾಗಿ ಬಹುಮಾನ ಗೆದ್ದ ಬಗ್ಗೆ ನಕಲಿ ಪತ್ರವನ್ನು ಕಳುಹಿಸಿದ್ದಾರೆ. ಇಬ್ಬರೂ ಕ್ಯಾಷಿಯರ್ ಜೊತೆ ಸಲೀಸಾಗಿ ಮಾತನಾಡಿ, ವಿವಿಧ ನೆಪಗಳನ್ನು ಹೇಳಿ 10.38 ಲಕ್ಷ ರೂ.ಗಳನ್ನು ಸಂಗ್ರಹಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿಯು 6 ಲಕ್ಷ ರೂ.ಗಳನ್ನು ಪಾವತಿಸಿದರೆ ಬಹುಮಾನದ ಮೊತ್ತವನ್ನು 25.56 ಲಕ್ಷ ರೂ.ಗಳಿಗೆ ಹೆಚ್ಚಿಸಬಹುದು ಎಂದು ಹೇಳಿದಾಗ ಕ್ಯಾಷಿಯರ್‌ಗೆ ತಾನು ಮೋಸ ಹೋಗಿದ್ದೇನೆ ಎಂದು ಅರಿವಾಗಿದೆ. ಇದಾದ ನಂತರ ಆತ ಪೊಲೀಸರನ್ನು ಸಂಪರ್ಕಿಸಿ, ದೂರು ದಾಖಲಿಸಿದ್ದಾರೆ. ಐಟಿ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.