ನ್ಯೂಸ್ ನಾಟೌಟ್ : ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನವನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಪ್ಪಿಕೊಂಡಿದ್ದು, ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಗುರುವಾರ(ಮಾ.27) ಹೇಳಿದ್ದಾರೆ.
ರಷ್ಯಾದ ಅಂತಾರಾಷ್ಟ್ರೀಯ ವ್ಯವಹಾರಗಳ ಕೌನ್ಸಿಲ್ (RIAC) ಆಯೋಜಿಸಿದ್ದ “ರಷ್ಯಾ ಮತ್ತು ಭಾರತ: ಹೊಸ ದ್ವಿಪಕ್ಷೀಯ ಕಾರ್ಯಸೂಚಿಯತ್ತ’ ಶೀರ್ಷಿಕೆಯ ಸಮ್ಮೇಳನದಲ್ಲಿ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಲಾವ್ರೊವ್, “ಪುಟಿನ್ ಭಾರತಕ್ಕೆ ಭೇಟಿ ನೀಡುವ ಸಲುವಾಗಿ ತಯಾರಿಯನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
“ಪುಟಿನ್ ಭಾರತಕ್ಕೆ ಭೇಟಿ ನೀಡಲು ಪ್ರಸ್ತುತ ಸಿದ್ಧತೆ ನಡೆಸಲಾಗುತ್ತಿದೆ” ಎಂದು ರಷ್ಯಾದ ವಿದೇಶಾಂಗ ಸಚಿವರು ಹೇಳಿದ್ದಾರೆಂದು ಸರ್ಕಾರಿ ಸ್ವಾಮ್ಯದ TASS ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.
ಕಳೆದ ವರ್ಷ ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಿಯಾದ ಮೇಲೆ ಮೊದಲ ಬಾರಿಗೆ ರಷ್ಯಾಕ್ಕೆ ಆಗಮಿಸಿದ್ದರು. ಈಗ ನಿಮ್ಮ ಸರದಿ ಎಂದಿದ್ದಾರೆ. ಆದರೆ ಯಾವಾಗ ಪುಟಿನ್ ಭಾರತಕ್ಕೆ ಆಗಮಿಸಲಿದ್ದಾರೆ ಎನ್ನುವ ದಿನಾಂಕವನ್ನು ಬಹಿರಂಗಪಡಿಸಿರಲ್ಲ.
2024ರ ಜುಲೈನಲ್ಲಿ ಪ್ರಧಾನಿ ಮೋದಿ ರಷ್ಯಾಕ್ಕೆ ಭೇಟಿ ನೀಡಿದ್ದರು. ಐದು ವರ್ಷಗಳಲ್ಲಿ ಮೋದಿಯ ಮೊದಲ ಭೇಟಿ ಇದಾಗಿತ್ತು. ಭೇಟಿಯ ವೇಳೆ ಪುಟಿನ್ ಅವರನ್ನು ಭಾರತಕ್ಕೆ ಆಹ್ವಾನಿಸಿದ್ದರು.
ಪುಟಿನ್ ಮತ್ತು ಮೋದಿ ಪ್ರತಿ ಎರಡು ತಿಂಗಳಿಗೊಮ್ಮೆ ದೂರವಾಣಿ ಸಂಭಾಷಣೆಗಳನ್ನು ನಡೆಸುತ್ತಾರೆ ಎನ್ನಲಾಗಿದೆ.
ಇದನ್ನೂ ಓದಿ:ಕಬ್ಬಿನ ಜ್ಯೂಸ್ ಮೆಷಿನ್ ನಲ್ಲಿ ಸಿಲುಕಿದ ಮಹಿಳೆಯ ಜಡೆ..! ವಿಡಿಯೋ ವೈರಲ್..!