ನ್ಯೂಸ್ ನಾಟೌಟ್: ಈ ಒಂದು ಆಘಾತಕಾರಿ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ. ಅದರಲ್ಲೂ ನಿವೃತ್ತ ಯೋಧನೋರ್ವ ಈ ಕೃತ್ಯವೆಸಗಿದ್ದು ಇಡೀ ನಾಗರಿಕ ಸಮಾಜವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಪತ್ನಿಯ ಶೀಲವನ್ನು ಶಂಕಿಸಿದ ಈತ ಆಕೆಯನ್ನು ಕ್ರೂರವಾಗಿ ಕೊಲೆ ಮಾಡಿ, ಮೃತದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿ, ದೊಡ್ಡ ಕುಕ್ಕರ್ನಲ್ಲಿ ಬೇಯಿಸಿ, ನಂತರ ಒಣಗಿಸಿ ಸುಟ್ಟುಹಾಕಿರುವ ಆಘಾತಕಾರಿ ಘಟನೆಯಿದು. ಹೈದರಾಬಾದ್ನ ಮೀರ್ಪೇಟ್ನಲ್ಲಿ ಈ ದರ್ಘಟನೆ ನಡೆದಿದೆ.
ಕೊಲೆಯಾದ ಮಹಿಳೆಯನ್ನು ವೆಂಕಟ ಮಾಧವಿ (35) ಎಂದು ಗುರುತಿಸಲಾಗಿದೆ. ಆಕೆಯ ಗಂಡ ಗುರುಮೂರ್ತಿ ಭೀಕರವಾಗಿ ಹತ್ಯೆಗೈದಿದ್ದಾನೆ.ಪೊಲೀಸರ ಪ್ರಕಾರ, ಪ್ರಕಾಶಂ ಜಿಲ್ಲೆಯ ಜೆ.ಪಿ. ಚೆರುವುವಿನ ನಿವೃತ್ತ ಯೋಧ ಗುರುಮೂರ್ತಿ ಮತ್ತು ವೆಂಕಟ ಮಾಧವಿ 13 ವರ್ಷಗಳ ಹಿಂದೆ ವಿವಾಹವಾದರು.ದಂಪತಿಗೆ ಒಬ್ಬ ಮಗಳು ಮತ್ತು ಮಗನಿದ್ದಾನೆ. ಐದು ವರ್ಷಗಳ ಹಿಂದೆ, ಜಿಲ್ಲಾಲಗುಡ ನ್ಯೂ ವೆಂಕಟೇಶ್ವರ ಕಾಲನಿಗೆ ತೆರಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಗುರುಮೂರ್ತಿ ಕಾಂಚನ್‌ಬಾಗ್‌ನಲ್ಲಿರುವ ಡಿಆರ್‌ಡಿಒದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಪತ್ನಿಯ ಮೇಲೆ ಗುರುಮೂರ್ತಿಗೆ ತುಂಬಾ ದಿನಗಳಿಂದ ಅನುಮಾನ ಮೂಡಿತ್ತು. ಇದರಿಂದ ಇಬ್ಬರ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು.ತಾಳ್ಮೆ ಕಳೆದುಕೊಂಡ ಗುರುಮೂರ್ತಿ ಆಕೆಯನ್ನು ಕ್ರೂರವಾಗಿ ಕೊಲೆ ಮಾಡಿದ್ದಾರೆನ್ನಲಾಗಿದೆ. ಇದಾದ ಬಳಿಕ ಕೊಲೆಯನ್ನು ಮುಚ್ಚಿಹಾಕಲು ಆಕೆ ಯಾರಿಗೂ ಹೇಳದೆ ಮನೆಯಿಂದ ಹೊರಟು ಹೋಗಿದ್ದಾಳೆಂದು ಕತೆ ಕಟ್ಟಿದ್ದಾನೆ. ಮಾಧವಿಯ ತಾಯಿ ಉಪ್ಪಳ ಸುಬ್ಬಮ್ಮ ಈ ತಿಂಗಳ 18 ರಂದು ಮೀರ್ಪೇಟೆ ಪೊಲೀಸ್ ಠಾಣೆಯಲ್ಲಿ ತಮ್ಮ ಮಗಳು ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿದರು. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.
ಗಂಡ ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿದ್ದುದನ್ನು ತಿಳಿದ ಪೊಲೀಸರು ಗುರುಮೂರ್ತಿ ಮೇಲೆ ಒಂದು ಕಣ್ಣಿಟ್ಟಿದ್ದರು. ಆತನ ನಡವಳಿಕೆ ಮತ್ತು ಚಲನವಲನಗಳ ಬಗ್ಗೆ ಅನುಮಾನಗೊಂಡು ಆತನನ್ನು ವಶಕ್ಕೆ ಪಡೆದು ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ನಿಜವಾದ ಸತ್ಯ ಬೆಳಕಿಗೆ ಬಂದಿದೆ. ಈ ಪ್ರಕರಣವನ್ನು ಆಳವಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ಮೀರ್ಪೇಟೆ ಸಿಐ ನಾಗರಾಜು ತಿಳಿಸಿದ್ದಾರೆ.
ಯೂಟ್ಯೂಬ್ ನೋಡಿದ ನಂತರ ಮೊದಲು ನಾಯಿಯ ಮೇಲೆ ಪ್ರಯೋಗ ಮಾಡಿದ ಗುರುಮೂರ್ತಿ, ಪೊಲೀಸರಿಗೆ ಯಾವುದೇ ಪುರಾವೆಗಳು ಅಥವಾ ಸುಳಿವುಗಳು ಸಿಗದಂತ ರೀತಿಯಲ್ಲಿ ತನ್ನ ಹೆಂಡತಿಯ ಕೊಲೆಗೆ ಯೋಜನೆ ರೂಪಿಸಿದ್ದ. ಮೊದಲು ಬೀದಿ ನಾಯಿಯ ಮೇಲೆ ಪ್ರಯೋಗ ಮಾಡಿದ.ಇದಾದ ಬಳಿಕ ಆತ ತನ್ನ ಹೆಂಡತಿಯ ದೇಹವನ್ನು ಅದೇ ರೀತಿಯಲ್ಲಿ ಕತ್ತರಿಸಿ, ಕುದಿಸಿ, ಒಣಗಿಸಿ ಸುಟ್ಟು ಹಾಕಿದನು.
ಇದಕ್ಕೂ ಮುನ್ನ ಮಾಧವಿ ನಾಪತ್ತೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಜಿಲ್ಲಾಲಗುಡದ ನ್ಯೂ ವೆಂಕಟೇಶ್ವರ ಕಾಲನಿಯಲ್ಲಿರುವ ಗುರುಮೂರ್ತಿ ಮತ್ತು ಮಾಧವಿ ವಾಸಿಸುವ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ಪೊಲೀಸರು ಕೂಲಂಕಷವಾಗಿ ಪರಿಶೀಲಿಸುತ್ತಿದ್ದರು. ಆದರೆ, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ನಿಜವಾದ ಕತೆ ಬೆಳಕಿಗೆ ಬಂದಿದೆ.