ಕರಾವಳಿಕೊಡಗುಪುತ್ತೂರುಸುಳ್ಯ

ಎಸ್‌ಡಿಪಿಐ ಕಚೇರಿ ಮೇಲಿನ ದಾಳಿಗೆ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

ನ್ಯೂಸ್ ನಾಟೌಟ್: ಎಸ್‌ಡಿಪಿಐ ಕಚೇರಿಗಳಿಗೆ ಪೊಲೀಸರು ದಾಳಿ ನಡೆಸುವ ವೇಳೆ ಹಾಕಿದ್ದ ಮೊಹರು ತೆರವು ಮಾಡಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾಗೆ (ಎಸ್‌ಡಿಪಿಐ) ಸೇರಿದ ಸ್ಥಳಗಳ ಮೇಲೆ ನಡೆಸಿದ ದಾಳಿಗೆ ಪೂರಕವಾಗಿ ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನ ಕುರಿತಾದ ದಾಖಲೆಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ.

ದಾಳಿ ನಡೆಸಿ, ಜಪ್ತಿ ಮಾಡಿರುವ ಸೊತ್ತುಗಳಿಗೆ ಹಾಕಲಾಗಿರುವ ಮೊಹರು ತೆರವುಗೊಳಿಸಲು ದಕ್ಷಿಣಕನ್ನಡ ಜಿಲ್ಲಾಡಳಿತಕ್ಕೆ ನಿರ್ದೇಶಿಸುವಂತೆ ಕೋರಿ ಎಸ್ ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದಿಸಿದ ವಕೀಲರು, ಮುಂಚಿತವಾಗಿ ನೋಟಿಸ್‌ ನೀಡದೆ ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಕಡೆ ಇರುವ ಎಸ್‌ಡಿಪಿಐ 17 ಕಚೇರಿಗಳನ್ನು ಸೀಲ್ ಮಾಡಿದ್ದಾರೆ. ಸೀಲ್ ಹಾಕಿದ್ದರೂ ಕಚೇರಿಗಳಿದ್ದ ಜಾಗಗಳಿಗೆ ಬಾಡಿಗೆ ಕಟ್ಟುತ್ತಿದ್ದೇವೆ. ಮುಂಬರುವ ವಿಧಾನಸಭೆ ಚುನಾವಣೆಗೆ ಎಸ್‌ಡಿಪಿಐ ಸಿದ್ಧತೆ ನಡೆಸಬೇಕಿದ್ದು, ಕಚೇರಿಗಳನ್ನು ಬಂದ್ ಮಾಡಿರುವುದರಿಂದ ಯಾವುದೇ ರಾಜಕೀಯ ಕಾರ್ಯಕ್ರಮ ನಡೆಸಲಾಗುತ್ತಿಲ್ಲ. ಆದ್ದರಿಂದ ಮೊಹರುಗಳನ್ನು ತೆರವು ಮಾಡಲು ಜಿಲ್ಲಾಡಳಿತಕ್ಕೆ ನಿರ್ದೇಶಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ಅರ್ಜಿಗೆ ಪ್ರಾಥಮಿಕ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲ ವಿನೋದ್ ಕುಮಾರ್, ಪಿಎಫ್ಐ ಅನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಪಿಎಫ್ಐನ ಸಾಮಗ್ರಿಗಳು ಎಸ್‌ಡಿಪಿಐ ಕಚೇರಿಯಲ್ಲಿ ದೊರೆತಿವೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ. ಆದರೆ, ಅರ್ಜಿಯಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಕಾಣಿಸಲಿಲ್ಲ ಎಂದು ಪೀಠಕ್ಕೆ ವಿವರಿಸಿದರು.

ವಾದ-ಪ್ರತಿವಾದ ಆಲಿಸಿದ ಪೀಠವು ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನ ಕುರಿತು ದಾಖಲೆಗಳನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಒದಗಿಸುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿ ಅರ್ಜಿ ವಿಚಾರಣೆಯನ್ನು ಫೆಬ್ರವರಿ 16ಕ್ಕೆ ಮುಂದೂಡಿತು.

ಎಸ್‌ಡಿಪಿಐ, ಪಿಎಫ್ಐ ಜತೆ ಯಾವುದೇ ಸಂಪರ್ಕ ಹೊಂದಿಲ್ಲ. ಪಿಎಫ್ಐ ಮತ್ತದರ ಅಂಗ ಸಂಸ್ಥೆಗಳನ್ನು ನಿಷೇಧಿಸುವ ಸಂದರ್ಭದಲ್ಲಿ ಗೃಹ ಸಚಿವಾಲಯ ಎಸ್‌ಡಿಪಿಐ ಹೆಸರನ್ನು ಸೇರಿಸಿಲ್ಲ. ಆದರೂ ಪ್ರತಿವಾದಿಗಳು ಪಕ್ಷಕ್ಕೆ ಸೇರಿದ ಸ್ಥಳಗಳ ಮೇಲೆ ಅಕ್ರಮವಾಗಿ ದಾಳಿ ನಡೆಸಿ, ಜಪ್ತಿ ಮಾಡಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.

Related posts

ಶೀಘ್ರದಲ್ಲೇ ಪಿಎಫ್‌ಐ , ಎಸ್‌ಡಿಪಿಐ ನಿಷೇಧ..?

ಪೆರುವಾಜೆ: ಪೆರುವಾಜೆ ಪದವಿ ಕಾಲೇಜಿನಲ್ಲಿ ಪರಿಣಾಮಕಾರಿ ಮಾತುಗಾರಿಕೆ ತರಬೇತಿ

ಮಕ್ಕಳ ದಾಹ ನೀಗಿಸಲೆಂದು ಅಜ್ಜಿ ತೋಡಿದ್ದ ಬಾವಿಯನ್ನೇ ಮುಚ್ಚಿದ ಅಧಿಕಾರಿಗಳು..!ರಾಜ್ಯವ್ಯಾಪಿ ವೈರಲ್ ಆಗಿದ್ದ ಅಜ್ಜಿಯ ನಿಸ್ವಾರ್ಥ ಸೇವೆಗೆ ಕೊನೆಗೂ ಫಲ ಸಿಗಲಿಲ್ಲ..!