ಕ್ರೈಂಬೆಂಗಳೂರುವೈರಲ್ ನ್ಯೂಸ್

ಹಿಂದೂ ವಿವಾಹ ನಂತರ ಮತಾಂತರವಾದ್ರೆ ಮದುವೆ ಅಸಿಂಧು ಆಗುತ್ತದೆಯೇ? ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ಪತಿ ಜೀವನಾಂಶ ಪಾವತಿಸಬೇಕೆ? ಕೋರ್ಟ್ ಹೇಳಿದ್ದೇನು?

ನ್ಯೂಸ್ ನಾಟೌಟ್: ಹಿಂದೂ ಧರ್ಮದ ಅನುಸಾರ ವಿವಾಹವಾದ ನಂತರ ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ಪತಿಯ ಜೊತೆಗಿನ ಎಲ್ಲ ವೈವಾಹಿಕ ಹಕ್ಕುಗಳನ್ನು ಕಳೆದುಕೊಂಡಂತಾಗುತ್ತದೆ ಎಂದು ಹೈಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ ಎನ್ನಲಾಗಿದೆ.

ಕೌಟುಂಬಿಕ ದೌ* ರ್ಜನ್ಯ ನಡೆಸದಿದ್ದರೂ ಪತ್ನಿಗೆ ನಾಲ್ಕು ಲಕ್ಷ ರೂ. ಪರಿಹಾರ ನೀಡಲು ನಿರ್ದೇಶಿಸಿದ್ದ ಬೆಂಗಳೂರಿನ 57ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಕ್ರಿಮಿನಲ್‌ ಮರು ಪರಿಶೀಲನಾ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್‌ (Justice Rajendra Badamikar) ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪತಿ ದೌಜನ್ಯ ಎಸಗಿರುವುದು ಸಾಬೀತಾಗದ ಹೊರತು ಕೌಟುಂಬಿಕ ದೌರ್ಜನ್ಯ (Domestic Violence) ಪ್ರಕರಣಗಳಲ್ಲಿ ಪತ್ನಿಗೆ ‘ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ’ಯಡಿ ಪರಿಹಾರ ನೀಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್‌, ಪ್ರಕರಣದಲ್ಲಿ ಪತ್ನಿಗೆ ಪರಿಹಾರ ಪಾವತಿಸಲು ಅರ್ಜಿದಾರ ಪತಿಗೆ ನಿರ್ದೇಶಿಸಿದ್ದ ಸೆಷನ್ಸ್‌ ನ್ಯಾಯಾಲಯದ ಆದೇಶ ರದ್ದುಪಡಿಸಿದೆ ಎನ್ನಲಾಗಿದೆ.

ಹಿಂದೂ ಧರ್ಮಕ್ಕೆ ಸೇರಿದ ಬೆಂಗಳೂರಿನ ರಾಜಾಜಿನಗರದ (Rajajinagar)ನಿವಾಸಿಯಾದ ಅರ್ಜಿದಾರ ಮತ್ತು ವಿದ್ಯಾರಣ್ಯಪುರದ ಆಕೆ 2000ರ ಸೆ.10ರಂದು ಹಿಂದೂ ಧಾರ್ಮಿಕ ಸಂಪ್ರದಾಯದಂತೆ ಮದುವೆಯಾಗಿದ್ದರು. ದಂಪತಿಗೆ ಒಂದು ಹೆಣ್ಣು ಮತ್ತು ಗಂಡು ಮಗು ಜನಿಸಿತ್ತು. ಆದರೆ, ಚಿಕ್ಕ ವಯಸ್ಸಿನಲ್ಲಿ ಗಂಡು ಮಗು ಕೊನೆಯುಸಿರೆಳೆದ ನಂತರ ಭಿನ್ನಾಭಿಪ್ರಾಯಗಳು ಏರ್ಪಟ್ಟು ಪತ್ನಿ ಮತ್ತು ಪತಿ ನಡುವೆ ಕಂದಕ ಸೃಷ್ಟಿಯಾಗಿತ್ತು ಎನ್ನಲಾಗಿದೆ. 2013ರಲ್ಲಿ ಪತಿ ವಿರುದ್ದ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಸೆಕ್ಷನ್‌ 12 ಅಡಿಯಲ್ಲಿ ಪರಿಹಾರ ಕೋರಿ ಪತ್ನಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ (Magistrate Court)ಅರ್ಜಿ ಸಲ್ಲಿಸಿದ್ದರು.

ಮದುವೆ ಸಂದರ್ಭದಲ್ಲಿ ತಮ್ಮ ಪೋಷಕರು ಪತಿಗೆ ನಗದು ಮತ್ತು ಚಿನ್ನಾಭರಣ ರೂಪದಲ್ಲಿ ಸಾಕಷ್ಟು ವರದಕ್ಷಿಣೆ ನೀಡಿದ್ದಾರೆ. ಇದರ ಹೊರತಾಗಿಯೂ ಪತಿ ಹೆಚ್ಚುವರಿ ವರದಕ್ಷಿಣೆಗೆ ಬೇಡಿಕೆಯಿಟ್ಟು, ತನ್ನನ್ನು ಅನುಚಿತವಾಗಿ ನಡೆಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಪರಿಹಾರ ನೀಡಲು ಪತಿಗೆ ಆದೇಶಿಸುವಂತೆ ಪತ್ನಿ ಕೋರಿದ್ದರು. ಪತ್ನಿಯ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದ ಪತಿ, ಪತ್ನಿ ತಾನಾಗಿಯೇ ನನ್ನನ್ನು ಬಿಟ್ಟು ಹೋಗಿದ್ದಾರೆ. ಆಕೆಯ ನಿರ್ಲಕ್ಷ್ಯದಿಂದಲೇ ಗಂಡು ಮಗು ಅಸುನೀಗಿದೆ. ಆಕೆ ಕ್ರೈಸ್ತ (Christianity) ಧರ್ಮಕ್ಕೆ ಮತಾಂತರಗೊಂಡಿದ್ದು, ಹೆಣ್ಣು ಮಗುವನ್ನು ಸಹ ಮತಾಂತರ ಮಾಡಲು ಯತ್ನಿಸಿದ್ದಾರೆ. ಪಾರ್ಶ್ವವಾಯುನಿಂದ ಬಳಲುತ್ತಿರುವ ಕಾರಣ ನನ್ನ ಜೀವನ ನಿರ್ವಹಣೆ ಮಾಡಿಕೊಳ್ಳಲು ಅಸಮರ್ಥನಾಗಿದ್ದೇನೆ. ಆದ್ದರಿಂದ ಪತ್ನಿಯ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.

ಆ ಅರ್ಜಿ ಸಂಬಂಧ ಪತಿ ಮತ್ತು ಪತ್ನಿಯ ವಾದ ಆಲಿಸಿದ್ದ ಹಾಗೂ ಅವರು ಒದಗಿಸಿದ್ದ ಸಾಕ್ಷ್ಯಾಧಾರ ಪರಿಶೀಲಿಸಿದ್ದ ಮ್ಯಾಜಿಸ್ಟ್ರೇಟ್‌ ಕೋರ್ಟ್‌, ಪತಿಯ ಕೌಟುಂಬಿಕ ದೌರ್ಜನ್ಯವನ್ನು ಸಾಬೀತುಪಡಿಸುವಲ್ಲಿ ಪತ್ನಿ ವಿಫಲವಾಗಿದ್ದಾರೆ. ಹಾಗಾಗಿ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪರಿಹಾರ ಪಡೆಯಲು ಪತ್ನಿ ಅರ್ಹವಾಗಿಲ್ಲ ಎಂದು ಸ್ಪಷ್ಟಪಡಿಸಿ ಅರ್ಜಿ ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಪತ್ನಿ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿಯ ವಿಚಾರಣೆ ನಡೆಸಿದ್ದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ, ಪತಿಯಿಂದ ಪತ್ನಿಯ ಮೇಲೆ ಕೌಟುಂಬಿಕ ದೌರ್ಜನ್ಯ ನಡೆದಿಲ್ಲ ಎಂದು ತೀರ್ಮಾನಿಸಿ, ಜೀವನಾಂಶ ಘೋಷಿಸಲು ನಿರಾಕರಿಸಿತ್ತು. ಆದರೆ, ತನ್ನ ಜೀವನ ನಿರ್ವಹಣೆ ಮಾಡಿಕೊಳ್ಳಲು ಪತ್ನಿ ಅಸಮರ್ಥಳಾಗಿರುವ ಕಾರಣ ಪತಿಯು ನಾಲ್ಕು ಲಕ್ಷ ರೂ. ಪರಿಹಾರ ಪಾವತಿಸಬೇಕೆಂದು 2015ರ ನ.13ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್‌ಗೆ ಕ್ರಿಮಿನಲ್‌ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಮದುವೆ ಅಸ್ವಿತ್ವದಲ್ಲಿದೆ ಮತ್ತು ಜೀವನ ನಿರ್ವಹಣೆ ಮಾಡಲು ಪತ್ನಿ ಅಸಮರ್ಥರಾಗಿದ್ದಾರೆ ಎಂಬ ಏಕೈಕ ಆಧಾರದ ಮೇಲೆ ಜೀವನಾಂಶ ಪಾವತಿಸಲು ಪತಿಗೆ ಸೆಷನ್ಸ್‌ ನ್ಯಾಯಾಲಯ ನಿರ್ದೇಶಿಸಿದೆ. ಆದರೆ, ಪತ್ನಿಯು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಆಕೆಯು ಪತಿಯೊಂದಿಗೆ ಹೊಂದಿದ್ದ ಎಲ್ಲ ವೈವಾಹಿಕ ಹಕ್ಕುಗಳನ್ನು ಕಳೆದುಕೊಂಡಂತಾಗುತ್ತದೆ. ವಿವಾಹ ವಿಚ್ಛೇದನ ಮಂಜೂರಾಗದಿದ್ದರೂ ಪತ್ನಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವ ಕಾರಣ ಮದುವೆಯೇ ಅಸಿಂಧುಗೊಳ್ಳುತ್ತದೆ ಹಾಗಾಗಿ ಜೀವನಾಂಶ ಪತಿ ಪಾವತಿಸಬೇಕಾಗಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.

Related posts

ಅಜ್ಜಾವರ-ಮೇನಾಲ: ರಿಕ್ಷಾ ಡ್ರೈವರ್ ವಿಷ ಸೇವಿಸಿ ಆತ್ಮಹತ್ಯೆ..!, ಸ್ಥಳಕ್ಕೆ ತೆರಳುತ್ತಿರುವ ಪೊಲೀಸರು

‘ಫ್ರೀ ಬಸ್ ಯಾನ’ ಸಂಭ್ರಮಿಸುತ್ತಿರುವ ವೇಳೆಯಲ್ಲೇ ಆಘಾತದ ಸುದ್ದಿ!,ಬಸ್ ರಶ್ ಆಗಿ ಬಾಗಿಲಲ್ಲಿ ನೇತಾಡುತ್ತಿದ್ದ ಬಾಲಕಿ ಆಯತಪ್ಪಿ ಬಿದ್ದು ಮೃತ್ಯು

ತ್ಯಾಜ್ಯ ಸಂಗ್ರಾಹಕನ ವಿಡಿಯೋ ವೈರಲ್ ಮಾಡಿ ಅಣಕಿಸಿದ ಯುವಕರು..! ಮೃತದೇಹ ಮರವೊಂದರಲ್ಲಿ ನೇತಾಡಿದ ಸ್ಥಿತಿಯಲ್ಲಿ ಪತ್ತೆ..!