ನ್ಯೂಸ್ ನಾಟೌಟ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ‘ಮಿನಿ ಸ್ವಿಟ್ಜರ್ಲೆಂಡ್’ ಎಂದೇ ಕರೆಯಲ್ಪಡುವ ಈ ಸ್ಥಳವು ಭಯೋತ್ಪಾದಕ ದಾಳಿಗೆ ನಲುಗಿದೆ. ಈ ಮಧ್ಯೆ ಈ ಘಟನೆಗೆ ಸಂಬಂಧ ಪಟ್ಟ ಹಾಗೆ ಹಲವಾರು ವಿಚಾರಗಳು ಬಯಲಿಗೆ ಬರುತ್ತಿವೆ.
ಪಹಲ್ಗಾಮ್ ನಲ್ಲಿ ಉಗ್ರರು, ತಮ್ಮ ಹೆಲ್ಮೆಟ್ ಗಳಲ್ಲಿ ಕೆಮರಾ ಅಳವಡಿಸಿಕೊಂಡು ಇಡೀ ಕೃತ್ಯದ ವೀಡಿಯೋ ಮಾಡಿದ್ದಾರೆ ಎನ್ನುವ ಶಾಕಿಂಗ್ ಸುದ್ದಿ ಹೊರಬಿದ್ದಿದೆ.ಭಯೋತ್ಪಾದಕರು ಹೆಚ್ಚು ಜನರನ್ನು ಕೊಲ್ಲುವ ಉದ್ದೇಶಕ್ಕಾಗಿಯೇ ಬೈಸರನ್ ಹುಲ್ಲುಗಾವಲನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.
3 ಮಂದಿ ಉಗ್ರರು ಏಕಕಾಲದಲ್ಲಿ ದಾಳಿ ನಡೆಸಿದ್ದು, ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕ ಸಾಲುಗಳಲ್ಲಿ ನಿಲ್ಲಿಸಿದ ಬಳಿಕ ಹತ್ಯೆ ಮಾಡಿದ್ದಾರೆ.ಘಟನೆಯಲ್ಲಿ ಗುಂಡೇಟಿನ ಬಳಿಕ ರಕ್ತಸ್ರಾವದಿಂದಲೇ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯ ತಡವಾಗಬೇಕು ಎಂಬ ಕಾರಣಕ್ಕೆ ಈ ಹುಲ್ಲುಗಾವಲನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.
ಉಗ್ರರ ಗುರುತು ಪತ್ತೆ
ಇಬ್ಬರು ಉಗ್ರರನ್ನು ವೀಡಿಯೋಗ್ರಾಬ್ ನಿಂದ ಪತ್ತೆ ಮಾಡಲಾಗಿದೆ. ಇಬ್ಬರೂ ಕಾಶ್ಮೀರದವರೇ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಉಗ್ರ ತರಬೇತಿಗಾಗಿ ಪಾಕಿಸ್ಥಾನಕ್ಕೆ ಹೋಗಿರುವ ಶಂಕೆ ವ್ಯಕ್ತವಾಗಿದೆ. ಉಗ್ರರನ್ನು ಹುಡುಕುವುದಕ್ಕಾಗಿ ತೀವ್ರ ಶೋಧ ಕಾರ್ಯ ಆರಂಭಿಸಲಾಗಿದ್ದು, ಡ್ರೋನ್ ಕೆಮರಾಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.