ನ್ಯೂಸ್‌ನಾಟೌಟ್: ಉತ್ತರಭಾರತದ ಹಲವೆಡೆ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಮಳೆಯಿಂದಾಗಿ ನಾಗಾಲ್ಯಾಂಡ್‌ನಾದ್ಯಂತ ಪ್ರವಾಹ ಉಂಟಾಗಿದ್ದು, ರಾಷ್ಟ್ರೀಯ ಹೆದ್ದಾರಿ 29ರಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ದಿಮಾಪುರ ವಿಮಾನ ನಿಲ್ದಾಣದಲ್ಲಿ ಭಾನುವಾರ (6) ಭಾರೀ ಮಳೆಯಾಗಿದ್ದು, ರನ್‌ವೇ ಮತ್ತು ಪಾರ್ಕಿಂಗ್ ಪ್ರದೇಶಗಳಲ್ಲಿ ನೀರು ನಿಂತ ಪರಿಣಾಮ, ವಿಮಾನಗಳ ಹಾರಾಟ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ ವಿಮಾನಯಾನ ಸಂಸ್ಥೆಗಳೊಂದಿಗೆ ಸಂವಹನ ನಡೆಸುವಂತೆ ಸೂಚಿಸಲಾಗಿದೆ. ದಿಮಾಪುರದಲ್ಲಿ ವಿದ್ಯುತ್ ಸ್ಪರ್ಶಿಸಿ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಪ್ರವಾಹದ ನೀರು ವಸತಿ ಪ್ರದೇಶಗಳಿಗೆ ನುಗ್ಗಿದೆ. ಇನ್ನೂ ನಿರಂತರ ಮಳೆಯಿಂದ ಭೂಕುಸಿತ ಉಂಟಾಗಿದ್ದು, ದಿಮಾಪುರ್ ಮತ್ತು ಕೊಹಿಮಾವನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾದ ರಾಷ್ಟ್ರೀಯ ಹೆದ್ದಾರಿ 29ರಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.
ದಿಮಾಪುರ್, ಕೊಹಿಮಾ ಮತ್ತು ನಿಯುಲ್ಯಾಂಡ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ಹಾನಿಯುಂಟಾಗಿದ್ದು, ಇದುವರೆಗೆ ಒಟ್ಟು 52 ಜನರನ್ನು ರಕ್ಷಿಸಲಾಗಿದೆ. ಪ್ರವಾಹದಿಂದಾಗಿ ಭತ್ತದ ಗದ್ದೆಗಳು ಮತ್ತು ಮೀನುಗಾರಿಕೆ ಸಂಪೂರ್ಣ ನಾಶವಾಗಿವೆ. ನಿಯುಲ್ಯಾಂಡ್ ಜಿಲ್ಲೆಯಲ್ಲಿ, ಸುಮಾರು 70 ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ದಿಮಾಪುರದ ಹಾಫ್-ನಾಗರ್ಜನ್ ಪ್ರದೇಶದಲ್ಲಿ ಪ್ರವಾಹದ ನೀರು ಮೂರು ಅಡಿಗಳಷ್ಟು ನಿಂತಿದ್ದು, ಅಲ್ಲಿನ ನಿವಾಸಿಗಳು ದೋಣಿಗಳನ್ನು ಬಳಸುವಂತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.