ನ್ಯೂಸ್ ನಾಟೌಟ್: ಇಡೀ ದ.ಕ. ಜಿಲ್ಲೆಯನ್ನೇ ಭಯದ ವಾತಾವರಣಕ್ಕೆ ತಳ್ಳುವಂತೆ ಮಾಡಿದ್ದ ಪ್ರಕರಣ ಪುತ್ತೂರಿನಿಂದ ವರದಿಯಾಗಿತ್ತು. ಶಸ್ತ್ರ ಚಿಕಿತ್ಸೆ ವೇಳೆ ಬಾಣಂತಿ ಹೊಟ್ಟೆಯಲ್ಲಿ ಬಟ್ಟೆ ಉಂಡೆ ಬಿಟ್ಟಿದ್ದು ಈ ಪ್ರಕರಣ ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಇದೀಗ ಈ ಪ್ರಕರಣವನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ತಜ್ಞರ ತಂಡದ ಮೂಲಕ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಅವರನ್ನೊಳಗೊಂಡ ತಂಡ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಘಟನೆಯ ಸಮಗ್ರ ಮಾಹಿತಿ ಪಡೆದಿದೆ. ಅಗತ್ಯ ದಾಖಲೆ ಪತ್ರ ಸಂಗ್ರಹಿಸಿದೆ. ಕೃತ್ಯ ಎಸಗಿದ ಆಸ್ಪತ್ರೆಗೂ ಭೇಟಿ ನೀಡಿ ಮಾಹಿತಿ ಪಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಕರಣದ ಬಗ್ಗೆ ನಗರ ಠಾಣೆಗೆ ದೂರು ನೀಡಲಾಗಿದ್ದು,ಘಟನೆ ಬಗ್ಗೆ ಆರೋಗ್ಯ ಇಲಾಖೆಯಿಂದ ವರದಿ ಕೇಳಿದ್ದು, ಅವರು ನೀಡುವ ವರದಿ ಆಧರಿಸಿ ಪ್ರಕರಣ ದಾಖಲಾಗಲಿದೆ ಎಂದು ಪುತ್ತೂರು ಉಪಅಧೀಕ್ಷಕ ಅರುಣ್ ನಾಗೇಗೌಡ ಹೇಳಿದ್ದಾರೆ. ಮೇಲ್ನೋಟಕ್ಕೆ ಘಟನೆಯಲ್ಲಿ ಸತ್ಯಾಂಶ ಇರುವಂತೆ ಕಾಣುತ್ತಿದೆ.ಯಾವುದಕ್ಕೂ ತಜ್ಞರ ತಂಡದ ವರದಿಯನ್ನು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಲಿದೆ. ಪೊಲೀಸ್ ಇಲಾಖೆಗೆ ವರದಿಯ ಅಗತ್ಯವಿದ್ದರೆ ನೀಡಲಾಗುತ್ತಿದ್ದು, ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಲಾಗುತ್ತದೆ ಎಂದು ಹೇಳಿದರು.