ನ್ಯೂಸ್ ನಾಟೌಟ್:ಎಲ್ಲಾ ಜೀವಿಗಳಿಗೂ ನೀರು ಅತ್ಯಗತ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ನೀರು ಕುಡಿಯುವುದು ಕೂಡ ಸೇಫಲ್ಲ ಅನ್ನುವ ಮಟ್ಟಿಗೆ ತಲುಪಿದೆ.ಏಕೆಂದರೆ ಎಲ್ಲೆಂದರಲ್ಲೂ ಕಲುಷಿತ ನೀರೇ ಕಾಣಿಸಿಕೊಳ್ಳುತ್ತಿದೆ.ಅದರಲ್ಲೂ ಬೆಂಗಳೂರಿನಂತಹ ಮಹಾನಗರಗಳಲ್ಲಿ ಕುಡಿಯುವ ನೀರು ವಿಷವಾಗುತ್ತಿದೆಯೇ ಅನ್ನೋ ಆತಂಕ ಮನೆ ಮಾಡಿದೆ.
ನಾವು ಹೊರಗಡೆ ಹೋದಾಗ ಸುಡು ಬಿಸಿಲಿಗೆ , ಎಮರ್ಜೆನ್ಸಿಗಾಗಿ ಮಿನರಲ್ ವಾಟರ್ ಬಾಟಲ್ ಗಳಲ್ಲಿರುವ ನೀರನ್ನೇ ಹೆಚ್ಚಾಗಿ ಕುಡಿಯುತ್ತೇವೆ. ಆದ್ರೆ ರಾಜ್ಯದಲ್ಲಿ ಪೂರೈಕೆಯಾಗುತ್ತಿರುವ ಕುಡಿಯುವ ಮಿನರಲ್ ವಾಟರ್ ಬಾಟಲ್ ಗಳಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿರುವುದು ಇದೀಗ ಗೊತ್ತಾಗಿದೆ.ಹೀಗಂತ ಸ್ವತಃ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯ (Food Safety Department) ವರದಿಯಿಂದಲೇ ತಿಳಿದುಬಂದಿದೆ.
ಇತ್ತೀಚೆಗೆ ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಸುಮಾರು 160 ಮಿನರಲ್ ವಾಟರ್ ಬಾಟಲ್ ಗಳನ್ನ (Mineral Water Bottle) ಸ್ಯಾಂಪಲ್ ಟೆಸ್ಟ್‌ಗೆ ಕಳುಹಿಸಿದಾಗ ಈ ಆಘಾತಕಾರಿ ಅಂಶ ಬಯಲಾಗಿದೆ.ಈ ಪೈಕಿ ಈಗಾಗಲೇ 100ಕ್ಕೂ ಹೆಚ್ಚು ಬಾಟಲ್ ಗಳ ವರದಿ ಕೈಸೇರಿದೆ. ಇಲಾಖೆ ಕಳುಹಿಸಿದ್ದ ಮಾದರಿಗಳಲ್ಲಿ 50% ನೀರು ಕುಡಿಯುವುದಕ್ಕೆ ಯೋಗ್ಯವಲ್ಲ ಅನ್ನುವ ವಿಷಯ ತಿಳಿದು ಬಂದಿದೆ.ಲೋಕಲ್ ಮಿನರಲ್ ವಾಟರ್ ಅನ್ ಸೇಫ್ ಅಂತ ರಿಪೋರ್ಟ್ ಬಂದಿರುವುದಾಗಿ ತಿಳಿದುಬಂದಿದೆ.
ಮಿನರಲ್ ವಾಟರ್ ಬಾಟಲ್ ವರದಿಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ತುಂಬಾ ಸಮಯದಿಂದ ನೀರು ಶೇಖರಣೆ ಮಾಡುವುದರಿಂದ ಪಾಚಿ ಅಂಶಗಳು ಕಂಡುಬಂದಿವೆ. ಅಲ್ಲದೇ ಕೆಲ ಕಂಪನಿಗಳು ಕಲುಷಿತ ನೀರು, ಬೋರ್ವೆಲ್ ನೀರನ್ನು ಬಾಟಲ್ ಮೂಲಕ ಮಾರಾಟ ಮಾಡುತ್ತಿದ್ದದ್ದೂ ಕಂಡುಬಂದಿದೆ. ನೀರನ್ನು ಶುದ್ದೀಕರಿಸದೇ ನೇರವಾಗಿ ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದ ಕಾರಣ ಹಾನಿಕಾರಕ ಅಂಶ ಪತ್ತೆಯಾಗಿರುವುದು ಕಂಡುಬಂದಿದೆ. ಇಂತಹ ಕಲುಷಿತ ನೀರು ಕುಡಿಯೋದ್ರಿಂದ ವಾಂತಿ, ಭೇದಿ, ಜ್ವರ, ಸುಸ್ತು ಕಾಣಿಸಿಕೊಳ್ಳುವುದು ಮಾತ್ರವಲ್ಲದೇ ಅದ್ರಲ್ಲೂ ಮಕ್ಕಳಿಗೆ ಬೇಗನೇ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ ಎಂದು ಆಹಾರ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.