ನ್ಯೂಸ್ ನಾಟೌಟ್: ಗೂಗಲ್ ಮ್ಯಾಪ್ ನಂಬಿ ಹೋಗಿ ಕಾರು ಸಮೇತ 30 ಅಡಿ ಆಳದ ಕೊಳಚೆ ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ಕಾರಿನ ಒಳಗೆ ಪರಿಶೀಲಿಸಿದ ಬಳೀಕ ಗೂಗಲ್ ಮ್ಯಾಪ್ ದಾರಿಯನ್ನು ತಪ್ಪಾಗಿ ತೋರಿಸಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ಪೊಲೀಸರು ಅದನ್ನು ದೃಢೀಕರಿಸಿಲ್ಲ.
ಮೃತರನ್ನು ದೆಹಲಿಯ ಮಂದವಾಲಿ ನಿವಾಸಿ 31 ವರ್ಷದ ಭರತ್ ಸಿಂಗ್ ಎಂದು ಗುರುತಿಸಲಾಗಿದ್ದು, ಅವರು ಸ್ಟೇಷನ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಮಾರ್ಚ್ 1 ರಂದು ಗ್ರೇಟರ್ ನೋಯ್ಡಾದ ಸೆಕ್ಟರ್ ಪಿ 4 ನಲ್ಲಿ ಶನಿವಾರ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭರತ್ ಸಿಂಗ್ ಮದುವೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಕಳೆದ ಶನಿವಾರ ಮಧ್ಯಾಹ್ನ 3.30 ರ ಸುಮಾರಿಗೆ ಕೇಂದ್ರೀಯ ವಿಹಾರ್ ಪ್ರದೇಶದ ಬಳಿ ಕಾರು ಚರಂಡಿಗೆ ಬಿದ್ದಿದೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತು ಎಂದು ಬೀಟಾ 2 ಪೊಲೀಸ್ ಠಾಣೆಯ ಉಸ್ತುವಾರಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಭರತ್ ಸಿಂಗ್ ರಾಣಿ ರಾಂಪುರದಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಕುಮಾರ್ ಹೇಳಿದರು.
ರಸ್ತೆಯ ಕೊನೆಯಲ್ಲಿ ಯಾವುದೇ ಎಚ್ಚರಿಕೆ ಫಲಕಗಳು ಇರಲಿಲ್ಲ, ಇದರಿಂದಾಗಿ ರಾತ್ರಿ ಕಾರು ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿರಬಹುದು ಎನ್ನಲಾಗಿದೆ.