ಕರಾವಳಿ

ಗೋಳಿತ್ತೊಟ್ಟು: ಪಿಡಿಒ ಪರ ದಲಿತ ಸಂಘರ್ಷ ಸಮಿತಿ, ಊರವರ ಶಕ್ತಿ ಪ್ರದರ್ಶನ

1.3k

ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮ ಪಂಚಾಯತ್ ನ ದಲಿತ ಪಿಡಿಒ ವರ್ಗಾವಣೆ ಮಾಡಿದ್ದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪುತ್ತೂರು, ಕಡಬ ತಾಲೂಕು ಸಮಿತಿ ಹಾಗೂ ಗೋಳಿತ್ತೊಟ್ಟು ಗ್ರಾಮಸ್ಥರು ಅಕ್ಟೋಬರ್ 11 ರಂದು ಬೆಳಗ್ಗೆ ಗೋಳಿತ್ತೊಟ್ಟು ಗ್ರಾಮ ಪಂಚಾಯತ್ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಪ್ರೊ ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ದ.ಕ.ಜಿಲ್ಲಾ ಸಂಘಟನಾ ಸಂಚಾಲಕ ಆನಂದ್ ಮಿತ್ತಬೈಲ್, ದಲಿತ ಎನ್ನುವ ಕಾರಣಕ್ಕೆ ಗ್ರಾಮದ ಬೆಳವಣಿಗೆಗೆ ಶ್ರಮಿಸಿದ ಪ್ರಾಮಾಣಿಕ ಅಧಿಕಾರಿ ಪಿ ವೆಂಕಟೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಯಾರೋ ಕೆಲವರು ತಮ್ಮ ಹಿತಾಸಕ್ತಿಗೋಸ್ಕರ ವೆಂಕಟೇಶ್ ಅವರನ್ನು ವರ್ಗಾವಣೆ ಮಾಡಿಸಿದ್ದಾರೆ. ಕೂಡಲೇ ಅವರ ವರ್ಗಾವಣೆಯನ್ನು ಸಚಿವ ಅಂಗಾರ ತಡೆ ಹಿಡಿಯಬೇಕು. ಇಲ್ಲದೇ ಇದ್ದರೆ ಸಚಿವ ಅಂಗಾರ ಅವರಿಗೆ ದಲಿತ ಸಂಘ ಘೇರಾವ್ ಹಾಕಲಿದೆ. ಪ್ರಾಮಾಣಿಕರ ಪರವಾಗಿ ನಮ್ಮ ದಲಿತ ಸಂಘರ್ಷ ಸಮಿತಿ ಯಾವಾಗಲೂ ಇರುತ್ತದೆ. ಆದೇಶವನ್ನು ರದ್ದು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಈ ವೇಳೆ ಮಾತನಾಡಿದ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್, ಪಿಡಿಒ ವಿರುದ್ಧ ಕಾಣದ ಕೈಗಳು ಷಡ್ಯಂತ್ರ ನಡೆಸಿವೆ. ಕೂಡಲೇ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದರು. ಜಿ.ಪಂ. ಮಾಜಿ ಸದಸ್ಯ ಸರ್ವೋತ್ತಮ್ ಗೌಡ, ಕಡಬ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಪೂವಪ್ಪ ಕರ್ಕೇರ, ದ.ಕ. ಜಿಲ್ಲಾ ದಲಿತ ಸೇವಾ ಸಮಿತಿ ಸ್ಥಾಪಕ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು, ದಲಿತ ಸಂಘರ್ಷ ಸಮಿತಿ ಸುಳ್ಯ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಸುಬ್ರಹ್ಮಣ್ಯ ಸೇರಿದಂತೆ ಹಲವಾರು ಗಣ್ಯರು ಪ್ರತಿಭಟನೆಯಲ್ಲಿ ಹಾಜರಿದ್ದರು. ಇದೇ ವೇಳೆ ಕಡಬ ತಾಲೂಕು ಪಂಚಾಯತ್ ನಿರ್ದೇಶಕ ಚಿನ್ನಪ್ಪ ಗೌಡರಿಗೆ ಮನವಿ ಸಲ್ಲಿಸಿ ಪಿಡಿಒ ವರ್ಗಾವಣೆಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಲಾಯಿತು.

See also  ಸೌಜನ್ಯ ಫ್ಲೆಕ್ಸ್ ತೆರವುಗೊಳಿಸಿದ ಪ್ರಕರಣ, ಪೊಲೀಸ್ ಅಧಿಕಾರಿಯ ಅಮಾನತಿಗೆ ಆಗ್ರಹಿಸಿ SP ಗೆ ದೂರು ಸಲ್ಲಿಸಿದ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget