ನ್ಯೂಸ್ ನಾಟೌಟ್: ಪುತ್ತೂರು ಬಸ್ ಸ್ಟ್ಯಾಂಡ್ ನಲ್ಲಿ ಅಜ್ಜಿಯ ಚಿನ್ನವನ್ನು ಕದ್ದು ಸುಳ್ಯಕ್ಕೆ ಪರಾರಿಯಾಗಿದ್ದ ಇಬ್ಬರು ಕಳ್ಳಿಯರನ್ನು ಸುಳ್ಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಗುರುವಾರ ಮಧ್ಯಾಹ್ನ ಪುತ್ತೂರು ಬಸ್ ಸ್ಟ್ಯಾಂಡ್ ನಲ್ಲಿ ಅಜ್ಜಿಯೊಬ್ಬರು ಬಸ್ ಗೆ ಕಾಯುತ್ತಿದ್ದಂತಹ ಸಂದರ್ಭದಲ್ಲಿ ಅಜ್ಜಿಯ ಬಳಿ ಇದ್ದ ಒಡವೆಯನ್ನು ಇಬ್ಬರು ಮಹಿಳೆಯರು ದೋಚಿದ್ದರು. ಈ ಕುರಿತಂತೆ ಅಜ್ಜಿ ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಸ್ವೀಕರಿಸಿದ ಪುತ್ತೂರು ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಚಿನ್ನ ಕದ್ದ ಕಳ್ಳಿಯರು ಸುಳ್ಯ ಕಡೆಗೆ ಬರುವ ಬಸ್ ಹತ್ತಿದ್ದನ್ನು ಗುರುತಿಸಲಾಯಿತು.
ಕೂಡಲೇ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಈ ಮೇರೆಗೆ ಪಿಎಸ್ ಐ ಸರಸ್ವತಿ, ಪೊಲೀಸ್ ಸಿಬ್ಬಂದಿ ಪ್ರಕಾಶ್ ಹಾಗೂ ಪದ್ಮಾವತಿ ಸುಳ್ಯ ಬಸ್ ನಿಲ್ದಾಣಕ್ಕೆ ಬಂದು ಕಾದು ಕುಳಿತು ಇಬ್ಬರು ಕಳ್ಳಿಯರನ್ನು ಹಿಡಿದಿದ್ದಾರೆ. ವಿಚಾರಿಸಿದಾಗ ಇವರ ಬಳಿ ಇರುವುದು ಅಜ್ಜಿಯ ಚಿನ್ನ ಎನ್ನುವುದು ಖಚಿತಗೊಂಡಿದೆ. ಇದೀಗ ಹೆಚ್ಚಿನ ತನಿಖೆಗೆ ಇಬ್ಬರನ್ನು ಸುಳ್ಯ ಪೊಲೀಸರು ಪುತ್ತೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ಸುಳ್ಯ ಬಸ್ ನಿಲ್ದಾಣದಲ್ಲಿ ಘಟನೆಗೆ ಸಾಕ್ಷಿಯಾದ ಪ್ರತ್ಯಕ್ಷದರ್ಶಿಯೊಬ್ಬರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ.