ನ್ಯೂಸ್ ನಾಟೌಟ್: ಮಂಗಳೂರನ್ನು ಬೆಚ್ಚಿಬೀಳಿಸಿದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ.ರೋಡ್ ಶಾಖೆಯ ದರೋಡೆ ಪ್ರಕರಣ ನಡೆದು ಐದೂವರೆ ತಿಂಗಳ ಬಳಿಕ ದರೋಡೆಕೋರರಿಂದ ವಶಪಡಿಸಿಕೊಂಡ 13. 5 ಕೋಟಿ ರೂ ಮೌಲ್ಯದ ಸುಮಾರು 18 ಕೆ.ಜಿ 306.302 ಗ್ರಾಂ ಚಿನ್ನಾಭರಣವನ್ನು ನ್ಯಾಯಾಲಯದ ಆದೇಶದಂತೆ ಬ್ಯಾಂಕ್ ಕೆ.ಸಿ. ರೋಡ್ ಶಾಖೆಯ ಮ್ಯಾನೇಜರ್ ಮತ್ತು ಗೋಲ್ಡ್ ಅಪ್ರೈಸರ್ ಸಮ್ಮುಖದಲ್ಲಿ ಪೊಲೀಸ್ ಅಧಿಕಾರಿಗಳು ಹಸ್ತಾಂತರಿಸಿದರು.
ಬ್ಯಾಂಕ್‌ನ ಕೆ.ಸಿ.ರೋಡ್ ಶಾಖೆಯಲ್ಲಿ ಹಾಡ ಹಗಲೇ ರಿವಾಲ್ವರ್ ತೋರಿಸಿ ಚಿನ್ನಾಭರಣ ಮತ್ತು ನಗದು ಹಣದೊಂದಿಗೆ ಮುಂಬಯಿ ಮೂಲದ ತಮಿಳುನಾಡಿನ ದರೋಡೆಕೋರರ ತಂಡ ದರೋಡೆ ಮಾಡಿ ತಮಿಳುನಾಡಿನ ತಿರುನಲ್ವೇಲಿಗೆ ಪರಾರಿಯಾಗಿತ್ತು. ದರೋಡೆ ಪ್ರಕರಣವನ್ನು ಭೇದಿಸಿದ್ದ ಮಂಗಳೂರು ಪೊಲೀಸರು ಖಚಿತ ಮಾಹಿತಿ ಮೇರೆಗೆ ಆರೋಪಿಗಳಾದ ತಮಿಳುನಾಡು ಮೂಲದ ಮುರುಗಂಡಿ ತೇವರ್ ಯಾನೆ ಕುಮಾರ್, ಕಣ್ಣನ್ ಮಣಿ, ಎಂ. ಷಣ್ಮುಗ ಸುಂದರಂ, ಸ್ಥಳೀಯ ಸೂತ್ರಧಾರಿಗಳಾದ ಶಶಿ ತೇವರ್ ಯಾನೆ ಭಾಸ್ಕರ ಬೆಳ್ಚಪ್ಪಾಡ ಮತ್ತು ಮೊಹಮ್ಮದ್ ನಝೀರ್‌ನನ್ನು ವಶಕ್ಕೆ ತೆಗೆದುಕೊಂಡು ಅವರಿಂದ ದರೋಡೆ ಮಾಡಿದ್ದ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಪೊಲೀಸರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಇದೀಗ ಸ್ವಾಧೀನ ಪಡಿಸಿಕೊಂಡ 18 ಕೆ.ಜಿ. 360.302 ಗ್ರಾಂ ಚಿನ್ನಾಭರಣವನ್ನು ದೂರುದಾರರಾದ ಬ್ಯಾಂಕ್‌ನ ಪ್ರಬಂಧಕಿ ವಾಣಿ ಅವರಿಗೆ ಬ್ಯಾಂಕ್‌ನ ಅಪ್ರೈಜರ್ ಅವರ ಸಮ್ಮುಖದಲ್ಲಿ ತೂಕ ಮಾಡಿ ಪೊಲೀಸರು ಹಸ್ತಾಂತರಿಸಿದರು.