ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ 10 ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಅವರಿಂದ ರೂ.1.52 ಕೋಟಿ ಮೌಲ್ಯ ಚಿನ್ನವನ್ನು ಜಪ್ತಿ ಮಾಡಿದ್ದಾರೆ.
‘ಕೊಲಂಬೊದಿಂದ ವಿಮಾನದಲ್ಲಿ ನ. 20ರಂದು ನಗರದ ನಿಲ್ದಾಣಕ್ಕೆ ಬರುತ್ತಿದ್ದ ಕೆಲ ಪ್ರಯಾಣಿಕರು ಚಿನ್ನ ಸಾಗಿಸುತ್ತಿದ್ದ ಮಾಹಿತಿ ಲಭ್ಯವಾಗಿತ್ತು. ನಿಲ್ದಾಣದಲ್ಲಿ ಪ್ರಯಾಣಿಕರನ್ನು ತಡೆದು ಪರಿಶೀಲನೆ ನಡೆಸಿದಾಗಲೇ ಅಕ್ರಮ ಸಾಗಣೆ ಪತ್ತೆಯಾಯಿತು’ ಎಂದು ಕಸ್ಟಮ್ಸ್ ಮೂಲಗಳು ಹೇಳಿವೆ.
‘10 ಪ್ರಯಾಣಿಕರ ಬಳಿ ಚಿನ್ನವಿರುವ ಸುಳಿವು ಲೋಹ ಶೋಧಕದಿಂದ ಗೊತ್ತಾಯಿತು. ಬ್ಯಾಗ್ ಹಾಗೂ ಬಟ್ಟೆಗಳಲ್ಲಿ ಹುಡುಕಾಡಿದರೂ ಚಿನ್ನ ಪತ್ತೆಯಾಗಲಿಲ್ಲ. ಪ್ರತ್ಯೇಕ ಕೊಠಡಿಗೆ ಕರೆದೊಯ್ದು ತಪಾಸಣೆ ನಡೆಸಿದಾಗ, ಪ್ರಯಾಣಿಕರ ಗುದದ್ವಾರದಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನ ಸಿಕ್ಕಿತು ಎಂದೂ ತಿಳಿಸಿವೆ.
ಆರೋಪಿಗಳು ಹಲವು ದಿನಗಳಿಂದ ಸಾಮೂಹಿಕವಾಗಿ ಚಿನ್ನ ಅಕ್ರಮ ಸಾಗಣೆಯಲ್ಲಿ ತೊಡಗಿರುವುದು ಗೊತ್ತಾಗಿದೆ. ಈ ಜಾಲದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಮಾಹಿತಿ ಇದ್ದು, ತನಿಖೆ ಮುಂದುವರಿಸಲಾಗಿದೆ ಎಂದೂ ಕಸ್ಟಮ್ಸ್ ಮೂಲಗಳು ಹೇಳಿವೆ.