ನ್ಯೂಸ್ ನಾಟೌಟ್: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಯುವತಿಯ ಸ್ನೇಹಿತನೊಬ್ಬ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ, ಮೃತದೇಹಕ್ಕೆ ಕಲ್ಲು ಕಟ್ಟಿ ಚಾವ್ಲಾ ಕಾಲುವೆಗೆ ಎಸೆದಿರುವ ಘಟನೆ ಬೆಳಕಿಗೆ ಇಂದು(ಮಾ. 20) ಬಂದಿದೆ.
ಸೀಮಾಪುರಿ ಸುಂದರ್ ನಗರದ ನಿವಾಸಿ ಕೋಮಲ್ ಕೊಲೆಯಾದ ಯುವತಿ ಎಂದು ಗುರುತಿಸಲಾಗಿದೆ. ಆಕೆಯ ಆಪ್ತ ಸ್ನೇಹಿತ ಆಸಿಫ್ ಕೊಲೆ ಮಾಡಿರುವ ಆರೋಪಿ ಎಂದು ವರದಿ ತಿಳಿಸಿದೆ.
ವೃತ್ತಿಯಲ್ಲಿ ಟ್ಯಾಕ್ಸಿ ಚಾಲಕನಾಗಿದ್ದ ಆಸಿಫ್ ಈ ಹಿಂದೆಯೇ ಯುವತಿಗೆ ಪರಿಚಯವಾಗಿದ್ದನು. ಮಾ. 12ರಂದು ಸೀಮಾಪುರಿಯಿಂದ ಆಸಿಫ್ ಆತನ ಕಾರಿನಲ್ಲಿ ಯುವತಿಯನ್ನು ಕರೆದುಕೊಂಡು ಹೋಗಿದ್ದ. ಈ ವೇಳೆ ಅವರಿಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಆಸಿಫ್, ಯುವತಿಯನ್ನು ಕತ್ತು ಹಿಸುಕಿ ಕೊಂದಿದ್ದ.
ಬಳಿಕ ಶವ ಮೇಲೆ ತೇಲಬಾರದೆಂದು ಆಕೆಯ ಮೃತದೇಹಕ್ಕೆ ಕಲ್ಲು ಕಟ್ಟಿ ಚಾವ್ಲಾ ಕಾಲುವೆಗೆ ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯ ಶವ ಕೊಳೆತಿದ್ದದ್ದರಿಂದ ಮಾ. 17ರಂದು ಕಾಲುವೆಯಲ್ಲಿ ತೇಲುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಚಾವ್ಲಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಯುವತಿ ನಾಪತ್ತೆಯಾದ ದಿನದಂದು ಆಕೆಯ ಮನೆಯವರು ಸೀಮಾಪುರಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು. ಆರೋಪಿ ಆಸಿಫ್ ನನ್ನು ಬಂಧಿಸಲಾಗಿದ್ದು, ಕಾರನ್ನು ವಶಕ್ಕೆ ಪಡಿಸಿಕೊಂಡಿದ್ದೇವೆ. ಕೊಲೆಯ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.