ನ್ಯೂಸ್ ನಾಟೌಟ್:ಮನೆಯೊಳಗೆ ಅಡುಗೆ ಅನಿಲ ಸಿಲಿಂಡರ್ ಗ್ಯಾಸ್ ಸೋರಿಕೆಯಿಂದ ಭಾರೀ ಸ್ಪೋಟದ ನಂತರ ಬೆಂಕಿ ಕಾಣಿಸಿಕೊಂಡಿದ್ದು, 2 ಮಂದಿ ಪ್ರಾಣಾಪಾಯದಿಂದ ಪವಾಡ ಸದೃಶವಾಗಿ ಪಾರಾಗಿರುವ ಆಘಾತಕಾರಿ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಳ್ಳುತ್ತಿದ್ದಂತೆಯೇ ಮನೆ ತುಂಬ ಬೆಂಕಿ ಆವರಿಸಿಕೊಂಡಿದ್ದು, ಅವರು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಘಟನೆಯ ನಿಖರವಾದ ಸ್ಥಳ ತಿಳಿದಿಲ್ಲ, ಆದರೆ ಜೂನ್ 18 ರಂದು ಮಧ್ಯಾಹ್ನ 3 ಗಂಟೆಗೆ ಘಟನೆ ಸಂಭವಿಸಿದೆ ಎಂದು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತದೆ. ಪೈಪ್ ನೊಂದಿಗೆ ಎಲ್ ಪಿಜಿ ಸಿಲಿಂಡರ್ ಸೋರಿಕೆಯಾಗುತ್ತಿದ್ದು, ಮಧ್ಯ ವಯಸ್ಸಿನ ಮಹಿಳೆಯೊಬ್ಬರು ಗ್ಯಾಸ್ ಸೋರಿಕೆಯನ್ನು ತಡೆಯಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ ಗ್ಯಾಸ್ ಸೋರಿಕೆ ತಡೆಯಲು ಸಾಧ್ಯವಾಗಲ್ಲ. ತದನಂತರ ಆಕೆ ಸಹಾಯ ಪಡೆಯಲು ಮನೆಯಿಂದ ಹೊರಗೆ ಹೋಗುತ್ತಾರೆ.
ಆದರೆ ಮನೆಯೊಳಗೆ ಅನಿಲ ಸೋರಿಕೆಯಾಗುತ್ತಲೇ ಇರುತ್ತದೆ. ಕೆಲ ನಿಮಿಷಗಳ ನಂತರ ಒಬ್ಬ ವ್ಯಕ್ತಿಯೊಂದಿಗೆ ಮಹಿಳೆ ಸ್ಥಳಕ್ಕೆ ಆಗಮಿಸುತ್ತಾರೆ. ಬೇರೆ ಬಾಗಿಲಿನಿಂದ ಮಹಿಳೆ ಕೊಠಡಿ ಪ್ರವೇಶಿಸಿದರೆ, ಪುರುಷನು ಇನ್ನೊಂದು ಬಾಗಿಲಿನಿಂದ ಪ್ರವೇಶಿಸುತ್ತಾನೆ. ಇಬ್ಬರೂ ಸಿಲಿಂಡರ್ ಹತ್ತಿರ ಹೋಗಿ ಗ್ಯಾಸ್ ಪೈಪ್ ನ ನಾಬ್ ಅನ್ನು ಮುಚ್ಚುವ ಮೂಲಕ ಗ್ಯಾಸ್ ಸೋರಿಕೆಯನ್ನು ತಡೆಯಲು ಪ್ರಯತ್ನಿಸುವಾಗ ಅಡುಗೆ ಮನೆಯೊಳಗೆ ಭಾರಿ ಸ್ಫೋಟ ಸಂಭವಿಸಿ, ಬೆಂಕಿಯು ಇಡೀ ಕೊಠಡಿಯನ್ನು ಆವರಿಸುತ್ತದೆ.
They were lucky that all the doors and windows were open, which allowed much of the gas to escape outside and significantly reduced the impact of the explosion. pic.twitter.com/HhS9TTz6m8
— Satyam Raj (@Satyamraj_in) June 22, 2025
ಅದೃಷ್ಟವಶಾತ್, ಮಹಿಳೆ ಗ್ಯಾಸ್ ಲೀಕ್ ಸಮಯದಲ್ಲಿ ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿದ್ದರು. ಇದು ಸ್ಫೋಟದ ಪ್ರಭಾವವನ್ನು ಕಡಿಮೆ ಮಾಡಿದೆ. ಭಾರೀ ಸ್ಫೋಟದಿಂದ ಮಹಿಳೆ ಮತ್ತು ಪುರುಷ ಇಬ್ಬರೂ ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.