ನ್ಯೂಸ್ ನಾಟೌಟ್: ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ಮುತ್ತಪ್ಪ ರೈ 2ನೇ ಪತ್ನಿ ಅನುರಾಧ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ರಿಕ್ಕಿ ರೈ ಕಾರು ಚಾಲಕ ಜಿ. ಬಸವರಾಜು ನೀಡಿದ ದೂರಿನ ಮೇರೆಗೆ ಮುತ್ತಪ್ಪ ರೈಗೆ ಆಪ್ತವಾಗಿದ್ದ ರಾಕೇಶ್ ಮಲ್ಲಿ, ರೈ ಅವರ ಎರಡನೇ ಪತ್ನಿ ಅನುರಾಧ, ನಿತೇಶ್ ಎಸ್ಟೇಟ್ ಮಾಲೀಕರಾದ ನಿತೇಶ್ ಶೆಟ್ಟಿ, ವೈದ್ಯನಾಥನ್ ಹಾಗೂ ಸಹಚರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೆಲ್ಲದರ ಮಧ್ಯೆ ಬಿಡದಿ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ. ಎಸ್ ಪಿ , ಇಬ್ಬರು ಎ ಎಸ್ ಪಿ, ಮೂವರು ಡಿವೈಎಸ್ ಪಿ 10 ಜನ ಇನ್ಪೆಕ್ಟರ್ ಗಳ ತಂಡ ಚಾಲಕ ಬಸವರಾಜ್ ಹಾಗು ಗನ್ ಮ್ಯಾನ್ ರಾಜ್ ಪಾಲ್ ರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮುತ್ತಪ್ಪ ರೈ ನಿವಾಸದ ಸಿಸಿ ಕ್ಯಾಮರ ಡಿವಿಆರ್ ವಶಪಡಿಸಿಕೊಂಡಿರುವ ಪೊಲೀಸರು ಮನೆಯಲ್ಲಿರುವ ಕೆಲಸಗಾರರನ್ನು ಒಬ್ಬೊಬ್ಬರನ್ನೇ ವಿಚಾರಣೆ ನಡೆಸುತ್ತಿದ್ದಾರೆ.
ಮುತ್ತಪ್ಪ ರೈ ಮನೆಯಲ್ಲಿದ್ದ ಗನ್ ಹಾಗು ಬುಲೆಟ್ ಗಳ ಸಂಖ್ಯೆ ಪರಿಶೀಲನೆ ಮಾಡಲಾಗುತ್ತಿದೆ. ಮುತ್ತಪ್ಪ ರೈ ಇದ್ದಾಗ ಬಳಸುತ್ತಿದ್ದ ಗನ್ ಗಳೆಷ್ಟು? ಈಗ ಇರುವ ಗನ್ ಗಳೆಷ್ಟು ? ಬಳಕೆಯಾದ ಗುಂಡುಗಳು, ಯಾವ ಕಾರಣಕ್ಕೆ ಬಳಕೆ ಮಾಡಲಾಗಿದೆ? ಎಂದು ಎಲ್ಲಾ ಮಾಹಿತಿ ಕಲೆ ಹಾಕಿದ್ದಾರೆ. ಜೊತೆಗೆ ಗನ್ ಮ್ಯಾನ್ ಗಳಿಂದಲೂ ಮಾಹಿತಿ ಸಂಗ್ರಹಿಸಿದ್ದು, ಗನ್ ಗಳ ಲೈಸೆನ್ಸ್ ಕೂಡ ಚೆಕ್ ಮಾಡಿದ್ದು, ಲೈಸನ್ಸ್ ಇಲ್ಲದ ಗನ್ ಇದ್ಯಾ ಎಂದು ಪರಿಶೀಲನೆ ಮಾಡಿದ್ದಾರೆ.
ಇನ್ನು ಈ ಪ್ರಕರಣದಲ್ಲಿ A2 ಆರೋಪಿಯಾಗಿರುವ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ ಏಪ್ರಿಲ್ 14 ರಂದೇ ವಿದೇಶಕ್ಕೆ ತೆರಳಿದ್ದಾರೆಂದು ತಿಳಿದುಬಂದಿದೆ. ಅನುರಾಧ ಬಳಸುತ್ತಿದ್ದ ಸಿಮ್ ಅಡ್ರೆಸ್ ಹುಡುಕಿ ನೋಟಿಸ್ ನೀಡಲು ಪೊಲೀಸರು ತೆರಳಿದ್ದರು. ಆದರೆ ಸಿಮ್ ಅಡ್ರೆಸ್ ಇರುವ ಮನೆಯನ್ನು ಅನುರಾಧ ಮಾರಾಟ ಮಾಡಿದ್ದಾರೆ. ಅಮೆರಿಕ ಮೂಲದ ವ್ಯಕ್ತಿಗೆ ಮನೆ ಮಾರಾಟ ಮಾಡಿದ್ದು, ಈ ಮನೆ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿದೆ. ಹೀಗಾಗಿ ಮೊದಲೇ ಪ್ಲಾನ್ ಮಾಡಿ ಅನುರಾಧ ಮನೆ ಮಾರಾಟ ಮಾಡಿದ್ರಾ ಎಂದು ಅನುಮಾನ ಮೂಡಿದೆ. ಏಪ್ರಿಲ್ 14ರ ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅನುರಾಧ ಬಳಸುತ್ತಿದ್ದ ಮೊಬೈಲ್ ಕೊನೆ ಲೊಕೇಶನ್ ತೋರಿಸುತ್ತಿದೆ.
ಇದೀಗ ಪ್ರಕರಣದ ಎಫ್ ಐಆರ್ ಸಂಬಂಧ ಜರ್ಮನಿಯಲ್ಲಿರುವ ಅನುರಾಧ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.ತಮ್ಮ ವಕೀಲರ ಮೂಲಕ ಹೈಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಪ್ರಕರಣದ ಎ1 ಆರೋಪಿ ರಾಕೇಶ್ ಮಲ್ಲಿ ಮುಂಬೈನಲ್ಲಿರುವ ಶಂಕೆ ವ್ಯಕ್ತವಾಗಿದೆ.
ಮಹಿಳಾ ಶವದಿಂದ ಕಿವಿಯೋಲೆ ಕದ್ದು ಪೊಲೀಸರನ್ನು ದೂರಿದ ವಾರ್ಡ್‌ಬಾಯ್..! ಆರೋಪಿ ಪರಾರಿ, ವಿಡಿಯೋ ವೈರಲ್..!