ನ್ಯೂಸ್ ನಾಟೌಟ್: ಬಿಸಿ ರೋಡು-ಹಾಸನ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ವೇಳೆ ಕಲ್ಲಡ್ಕದಲ್ಲಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿಯ ನಿರ್ಮಾಣ ಹಂತದ ಪಿಲ್ಲರ್ ಗೆ ಹಾಕಿದ ಕಬ್ಬಿಣದ ಸಲಾಕೆ ಕುಸಿತಗೊಂಡ ಘಟನೆ ಗುರುವಾರ ಮಧ್ಯಾಹ್ನ ವೇಳೆ ನಡೆದಿದೆ.
ಕಲ್ಲಡ್ಕ ಪೇಟೆಯಲ್ಲಿ ಕಳೆದ ಕೆಲ ತಿಂಗಳಿನಿಂದ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಬಹಳ ನಿಧಾನಗತಿಯಲ್ಲಿ ಸಾಗುತ್ತಿದ್ದು, ಮೊದಲೇ ವಾಹನ ಸವಾರರು ಹಾಗೂ ಸಾರ್ವಜನಿಕರು ಹಲವು ರೀತಿಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಕಾಮಗಾರಿ ತೀರಾ ಅವೈಜ್ಞಾನಿಕ ರೀತಿಯಲ್ಲಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿರುವ ಹಾಗೂ ಆಕ್ರೋಶ ವ್ಯಕ್ತಪಡಿಸುತ್ತಿರುವ ಮಧ್ಯೆ ಇದೀಗ ಹಗಲು ಹೊತ್ತಿನಲ್ಲೇ ನಿರ್ಮಾಣ ಹಂತದ ಪಿಲ್ಲರ್ ಕಾಮಗಾರಿ ಕುಸಿತ ಕಂಡು ಬಂದಿರುವುದರಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಹಾಗೂ ಭಯ ವ್ಯಕ್ತವಾಗಿದೆ.
ಅಸುರಕ್ಷಿತ ಹಾಗೂ ಅವೈಜ್ಞಾನಿಕ ರೀತಿಯ ಕಾಮಗಾರಿ ನಡೆಯುತ್ತಿರುವುದೇ ಅವಾಂತರಕ್ಕೆ ಕಾರಣವಾಗಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಲ್ಲರ್ ಕುಸಿತದ ವೇಳೆ ವಾಹನ ಹಾಗೂ ಸಾರ್ವಜನಿಕರು ಸ್ಥಳದಲ್ಲಿ ಇಲ್ಲದೆ ಇರುವುದರಿಂದ ಸಂಭಾವ್ಯ ಭಾರೀ ಅನಾಹುತ ಸ್ವಲ್ಪದರಲ್ಲೇ ತಪ್ಪಿ ಹೋಗಿದೆ.