ನ್ಯೂಸ್ ನಾಟೌಟ್:ಶಿಕ್ಷಕರೇ ಎಚ್ಚರ!! ಇನ್ನು ಮುಂದೆ ಶಾಲೆಯಲ್ಲಿ ಮಕ್ಕಳು ಟಾಯ್ಲೆಟ್ ಕ್ಲೀನ್ ಮಾಡಿದ್ರೆ ಗಂಡಾಂತರ ತಪ್ಪಿದ್ದಲ್ಲ.ಹೌದು, ಶಿಕ್ಷಣ ಇಲಾಖೆ ಹೊಸ ಆದೇಶವೊಂದನ್ನು ಪ್ರಕಟಿಸಿದೆ. ಅದೇನೆಂದ್ರೆ ಶಾಲಾ ಮಕ್ಕಳು ಶೌಚಾಲಯ ಸ್ವಚ್ಛಗೊಳಿಸಿದರೆ ಶಿಕ್ಷಕರ ಮೇಲೆಯೇ ಎಫ್‌ಐಆರ್ (FIR) ದಾಖಲಿಸಲಾಗುವುದು ಎಂದು ಶಿಕ್ಷಣ ಇಲಾಖೆ ಮತ್ತೆ ಎಚ್ಚರಿಕೆ ನೀಡಿದೆ.
ಈ ಹಿಂದೆಯೇ ಶಿಕ್ಷಣ ಇಲಾಖೆ ಶಾಲಾ ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವಂತಿಲ್ಲ (Toilet Clenaing) ಎಂದು ಆದೇಶ ಹೊರಡಿಸಿದ್ದರೂ , ರಾಜ್ಯದ ಕೆಲ ಶಾಲೆಗಳಲ್ಲಿ ಪ್ರಕರಣ ವರದಿಯಾದ ಬೆನ್ನಲ್ಲೇ ಮತ್ತೊಮ್ಮೆ ಶಿಕ್ಷಣ ಇಲಾಖೆ ಆದೇಶ ಪ್ರಕಟಿಸಿದೆ.ಶೌಚಾಲಯ ಕ್ಲೀನ್ ಮಾಡಿಸುವ ಶಿಕ್ಷಕರ ವಿರುದ್ಧ ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದೆ.
ಶಿಕ್ಷಣ ಇಲಾಖೆ ಆದೇಶದಲ್ಲೇನಿದೆ?
“ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯಗಳ ಸ್ವಚ್ಛತೆಯನ್ನು ಕಡ್ಡಾಯವಾಗಿ ಮಾಡಿಸಬಾರದೆಂದು ಈಗಾಗಲೇ ಸಂಬಂಧಿಸಿದ ಶಾಲಾ ಶಿಕ್ಷಣ ಇಲಾಖಾಧಿಕಾರಿಗಳು ಮತ್ತು ಸರ್ಕಾರಿ ಪ್ರಾಥಮಿಕ/ಪ್ರೌಢಶಾಲಾ ಮುಖ್ಯ ಶಿಕ್ಷಕರುಗಳಿಗೆ ಈಗಾಗಲೇ ಉಲ್ಲೇಖಿತ ಸುತ್ತೋಲೆಯ ಮೂಲಕ ತಿಳಿಸಲಾಗಿದೆ. ಆದರೂ ಸಹ ವಿದ್ಯಾರ್ಥಿಗಳಿಂದ ಶೌಚಾಲಯಗಳ ಸ್ವಚ್ಛತೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಬಗ್ಗೆ ಇತ್ತೀಚೆಗೆ ಕೆಲವು ಪ್ರಕರಣಗಳು ಬೆಳಕಿಗೆ ಬಂದಿರುವುದನ್ನು ಇಲಾಖೆಯು ಗಮನಿಸಿದೆ.
ಸರ್ಕಾರದಿಂದ ಮತ್ತು ಇಲಾಖೆಯಿಂದ ಕಾಲ-ಕಾಲಕ್ಕೆ ಹೊರಡಿಸಲಾಗುವ ಸೂಚನೆಗಳನ್ನು ಮತ್ತು ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸುವಂತೆ ಸೂಚನೆಗಳನ್ನು ನೀಡಲಾಗುತ್ತಿದ್ದರೂ ಸಹ ಇಂತಹ ಸೂಚನೆಗಳನ್ನು ಉಲ್ಲಂಘಿಸುತ್ತಿರುವುದು ಗಂಭೀರವಾಗಿ ಪರಿಗಣಿಸಿ ಆಕ್ಷೇಪಿಸಿದೆ.ಈ ಹಿನ್ನೆಲೆಯಲ್ಲಿ ಮತ್ತೆ ಇಂತಹ ಘಟನೆಗಳು ಮರುಕಳಿಸಿದ್ದಲ್ಲಿ ಅಂತವರ ವಿರುದ್ಧ ಇಲಾಖಾ ವತಿಯಿಂದ ನಿಯಮಾನುಸಾರ ಕಠಿಣ ಶಿಸ್ತು ಕ್ರಮಗಳನ್ನು ಜರುಗಿಸಲಾಗುವುದು ಅಲ್ಲದೆ ಪ್ರಥಮ ವರ್ತಮಾನ ವರದಿ (FIR) ದಾಖಲಿಸಲಾಗುವುದು ಮತ್ತು ಸಂಬಂಧಿಸಿದ ಶಾಲಾ ಶಿಕ್ಷಣ ಇಲಾಖಾಧಿಕಾರಿಗಳು ಮತ್ತು ಸರ್ಕಾರಿ ಪ್ರಾಥಮಿಕ/ಪ್ರೌಢ ಶಾಲಾ ಮುಖ್ಯ ಶಿಕ್ಷಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು. ಉಲ್ಲೇಖಿತ ಪತ್ರದಲ್ಲಿ ಶೌಚಾಲಯ ಸ್ವಚ್ಛತೆಯನ್ನು ನಿರ್ಹಿಸುವ ಕುರಿತು ತಿಳಿಸಿರುವ ಅಂಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮತ್ತೊಮ್ಮೆ ಎಚ್ಚರಿಸಲಾಗಿದೆ ಎಂದು ತಿಳಿಸಿದೆ.