ನ್ಯೂಸ್ ನಾಟೌಟ್: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಆಲಂಪಾಡಿ ಎಂಬಲ್ಲಿ ಬುಧವಾರ ರಾತ್ರಿ ಮೂವರು ಸಹೋದರರ ನಡುವೆ ಜಗಳ ನಡೆದು ಓರ್ವನಿಗೆ ಕತ್ತಿಯಿಂದ ಕಡಿದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ವರದಿಯಾಗಿದೆ.
ಗಾಯಾಳುವನ್ನು ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಆಲಂಪಾಡಿ ನಿವಾಸಿ ರಾಜಶೇಖರ (37) ಎಂದು ಗುರುತಿಸಲಾಗಿದೆ. ಸಹೋದರ ಜಯರಾಜ್ ಹಲ್ಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ರಾಜಶೇಖರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ರಾತ್ರಿ ರಾಜಶೇಖರ ಅವರು ಆಲಂಪಾಡಿಯಲ್ಲಿರುವ ತನ್ನ ಮನೆಯಲ್ಲಿದ್ದಾಗ ಅಲ್ಲಿಗೆ ಆಗಮಿಸಿದ ಅವರ ಸಹೋದರ ಮನೋಜ್ ಕುಮಾರ್ ಎಂಬವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ವೇಳೆ ಅವರಿಬ್ಬರ ನಡುವೆ ಜಗಳ ನಡೆದಿದೆ. ಇದೇ ವೇಳೆ ಅಲ್ಲಿಗೆ ಬಂದ ಇನ್ನೋರ್ವ ಸಹೋದರ ಜಯರಾಜ್ ತನಗೆ ಕತ್ತಿಯಿಂದ ಕಡಿದು ಗಾಯಗೊಳಿಸಿದ್ದಾನೆ ಎಂದು ರಾಜಶೇಖರ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.