ನ್ಯೂಸ್ ನಾಟೌಟ್: ಅಂದುಕೊಂಡಂತೆಲ್ಲ ಜೀವನ ನಡೆಯುವುದಿಲ್ಲ. ಬದುಕಿನ ಬಂಡಿಗಾಗಿ, ಅನಿಶ್ಚಿತತೆಯ ಬದುಕಿಗಾಗಿ ನಿಶ್ಚಿತ ಹೋರಾಟ ಮಾಡುವ ಮನುಷ್ಯ ಕೊನೆಗೆ ಸಮಾಜಕ್ಕೆ, ಬಂಧು ಬಳಗಕ್ಕೇ ಬೇಡವಾಗುತ್ತಾನೆ. ಎಲ್ಲರು ಇದ್ದೂ ಒಂಟಿಯಾಗಿ ಬಿಡುತ್ತಾನೆ. ಈ ಮಾತಿಗೆ ಸುಳ್ಯದ ಖಾಸಗಿ ಬಸ್ ನಲ್ಲಿ ಡ್ರೈವರ್ ಆಗಿದ್ದ ವ್ಯಕ್ತಿಯೊಬ್ಬರ ಜೀವನವನ್ನು ಜ್ವಲಂತ ಉದಾಹರಣೆಯಾಗಿ ನೋಡಬಹುದು.
ಇವರ ಹೆಸರು ಜನ್ನ ಅಲಿಯಾಸ್ ಜನಾರ್ದನ, ಅಜ್ಜಾವರ ಮೂಲದವರು. ಇವರು ಸುಳ್ಯದ ಖಾಸಗಿ ಬಸ್ ವೊಂದರಲ್ಲಿ ಕೆಲವು ವರ್ಷ ಬಸ್ ಚಾಲಕರಾಗಿ ದುಡಿದಿದ್ದರು. ಸುಳ್ಯ – ಮಂಡೆಕೋಲು ಬಸ್ ನಲ್ಲಿ ಸೇವೆ ಸಲ್ಲಿಸಿದ್ದ ಇವರು ಬಳಿಕ ಕೆಲಸ ಬಿಟ್ಟು ಆಟೋ ಚಾಲಕರಾಗಿಯೂ ದುಡಿದಿದ್ದರು. ಕೆಲವು ಸಮಯಗಳಿಂದ ಇವರ ಆರೋಗ್ಯ ತೀವ್ರ ಹದಗೆಟ್ಟಿದೆ. ಒಂದು ಕಾಲು ಕೊಳೆತೇ ಹೋಗಿದೆ. ಶುಗರ್ ಲೆವೆಲ್ ಜಾಸ್ತಿ ಆಗಿ ಕಾಲು ಕೊಳೆತು ಹೋಗಿದೆ ಎಂದು ತಿಳಿದು ಬಂದಿದೆ.
ಇವರು ಸುಳ್ಯದಲ್ಲಿ ಬಿದ್ದಿರುವುದನ್ನು ಕಂಡ ಪ್ರಗತಿ ಆಂಬ್ಯುಲೆನ್ಸ್ ನ ಅಚ್ಚು, ಶ್ರೀ ಮುತ್ತಪ್ಪನ್ ಆಂಬ್ಯುಲೆನ್ಸ್ ನ ಅಭಿಲಾಷ್ ಹಾಗೂ ಸುಳ್ಯ ತಾಲೂಕು ಆಂಬ್ಯುಲೆನ್ಸ್ ಕಾರ್ಯದರ್ಶಿ ಹಾಗೂ ಎಸ್ ಎಸ್ ಎಫ್ ಆಂಬ್ಯುಲೆನ್ಸ್ ಚಾಲಕ ಸಿದ್ದೀಕ್ ಕುಟುಂಬಸ್ಥರಿಗೆ ವಿಚಾರ ಮುಟ್ಟಿಸಿದ್ದಾರೆ. ಆದರೆ ಯಾರೂ ಕೂಡ ಕ್ಯಾರೆ ಅನ್ನಲಿಲ್ಲ. ಯಾರೂ ಇಲ್ಲದ ವ್ಯಕ್ತಿಯನ್ನು ಸುಳ್ಯದ ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳಲು ಕೇಳಲಿಲ್ಲ. ಈ ಹಿನ್ನೆಲೆಯಲ್ಲಿ ಸುಳ್ಯದ ಸರ್ಕಾರಿ ಆಸ್ಪತ್ರೆಯ ವೈದ್ಯರ ಸಹಾಯ ಪಡೆದುಕೊಂಡು ಆ ವ್ಯಕ್ತಿಯನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಕಳುಹಿಸಿಕೊಡಲಾಗಿದೆ.