ನ್ಯೂಸ್ ನಾಟೌಟ್ : ಇಲ್ಲೊಬ್ಬ ವಕೀಲರು ಬರೋಬ್ಬರಿ 138 ದಂಪತಿಯನ್ನು ವಿಚ್ಛೇದನ ಪಡೆಯದಂತೆ ಮನವೊಲಿಸಿ ತಡೆದಿದ್ದಾರೆ. ಆದರೆ ಕೊನೆಗೆ ಅವರ ಪತ್ನಿಯೇ ಡಿವೋರ್ಸ್ ಕೊಟ್ಟ ಆಶ್ಚರ್ಯಕರ ಸಂಗತಿ ಗುಜರಾತ್ ನಲ್ಲಿ ನಡೆದಿದೆ
ಗುಜರಾತ್‌ನ ಈ ವಕೀಲರು ಕಳೆದ 16 ವರ್ಷಗಳಿಂದ ವೃತ್ತಿ ಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ. ವಕೀಲರಾಗಿ ಉತ್ತಮ ಹೆಸರನ್ನೂ ಪಡೆದಿದ್ದರು, ಈವರೆಗೆ ವಿಚ್ಚೇದನ ಪಡೆಯಲು ಬಂದಿದ್ದ ಸುಮಾರು 138 ಜೋಡಿ ದಂಪತಿಯನ್ನು ಡಿವೋರ್ಸ್ ಪಡೆಯದಂತೆ ಮತ್ತೆ ಸಂಸಾರ ನಡೆಸುವಂತೆ ಮನವೊಲಿಸಿ ಈ ವಕೀಲರು ತಡೆದಿದ್ದಾರೆ. ಅಷ್ಟೇ ಅಲ್ಲ ಅಷ್ಟೂ ಜೋಡಿಗಳಿಂದ ಯಾವುದೇ ಶುಲ್ಕವನ್ನು ಕೂಡ ಪಡೆಯದೆ ಸಮಾಜ ಸೇವೆ ಮಾಡಿದ್ದಾರೆ ಎನ್ನಲಾಗಿದೆ.
ತನ್ನ ಬಳಿ ಬರುವ ಜನರಿಂದ ವಕೀಲರು ಯಾವುದೇ ಶುಲ್ಕ ಪಡೆಯುತ್ತಿರಲಿಲ್ಲ. ಇದರಿಂದ ಕುಟುಂಬದಲ್ಲಿ ಆರ್ಥಿಕ ಸಂಕಷ್ಟ ಶುರುವಾಗಿ ಗಂಡ ಹೆಂಡತಿ ಮಧ್ಯೆ ಜಗಳವಾಗಿ ಅದು ಡಿವೋರ್ಸ್ ತನಕ ಬಂದು ನಿಂತಿದೆ.
ಇನ್ನು ವಕೀಲರಿಗೆ ಒಬ್ಬರು ಮಗಳಿದ್ದು ಕಾನೂನು ಪದವಿ ಓದುತ್ತಿದ್ದಾಳೆ. ಸದ್ಯ ಮಗಳು ತನ್ನ ತಾಯಿಯ ಜೊತೆ ವಾಸ ಮಾಡುತ್ತಿದ್ದಾಳೆ ಎನ್ನಲಾಗಿದೆ. ಸದ್ಯ ಹೆಂಡತಿ ನ್ಯಾಯಾಲಯದ ಮೆಟ್ಟಿಲೇರಿದ್ದು ವಿಚ್ಚೇದನ ಪ್ರಕರಣದ ತನಿಖೆ ನಡೆಯುತ್ತಿದೆ. ಅಷ್ಟು ಜನರ ವಿಚ್ಛೇದನವನ್ನು ತಡೆದ ವಕೀಲರಿಗೆ ತನ್ನ ಹೆಂಡತಿಯನ್ನು ಮನವೊಲಿಸಲು ಸಾಧ್ಯವಾಗದೇ ಇರೋದು ವಿಪರ್ಯಾಸ.