ನ್ಯೂಸ್ ನಾಟೌಟ್: ಸರ್ಕಾರಿ ಶಾಲಾ ಮಕ್ಕಳ ಹಾಜರಾತಿಗೆ ಫೇಸ್ ರೆಕಗ್ನಿಷನ್, ಮತ್ತು 550 ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪನೆ, ಅತಿಥಿ ಶಿಕ್ಷಕರು, ಉಪನ್ಯಾಸಕರ ಗೌರವಧನ 2000 ರು ಹೆಚ್ಚಳ, ಬಿಸಿಯೂಟ ನೌಕರರ ಗೌರವಧನ 1000 ರು. ಏರಿಕೆ, 10,267 ಶಾಲಾ ಶಿಕ್ಷಕರ ನೇಮಕ, ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕೋಡಿಂಗ್ ಕಲಿಕೆಗೆ ಅಗಸ್ತ್ಯ ಫೌಂಡೇಶನ್ ಸಹಯೋಗದೊಂದಿಗೆ ಐ-ಕೋಡ್ ಲ್ಯಾಬ್ ಸ್ಥಾಪನೆ ಮುಂತಾದ ಘೋಷಣೆಗಳನ್ನು ಬಜೆಟ್ ನಲ್ಲಿ ತಿಳಿಸಲಾಗಿದೆ.
ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕೆ ಒಟ್ಟಾರೆ 45,286 ಕೋಟಿ ರೂ.ಅನುದಾನ ಒದಗಿಸಲಾಗಿದ್ದು, ಇದು ಒಟ್ಟು ಬಜೆಟ್ ಗಾತ್ರದ ಶೇ.10ರಷ್ಟಾಗಿದೆ. ಕಳೆದ ಬಜೆಟ್ ಗೆ ಹೋಲಿಸಿದರೆ ಶಿಕ್ಷಣಕ್ಕೆ ಶೇ.2ರಷ್ಟು ಅನುದಾನ ಕಡಿಮೆಯಾಗಿದೆ ಎನ್ನಲಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಖಚಿತಪಡಿಸಲು ‘ನಿರಂತರʼ ಕಾರ್ಯಕ್ರಮದಡಿ ಫೇಸ್ ರೆಕಗ್ನಿಷನ್ ವ್ಯವಸ್ಥೆ ಜಾರಿಗೊಳಿಸಲಾಗುವುದು. ಪ್ರೌಢಶಾಲಾ, ಪಿಯು ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಗೆ ‘ಸ್ಕಿಲ್ ಅಟ್ ಸ್ಕೂಲ್’ ಕಾರ್ಯಕ್ರಮ ರೂಪಿಸಲಾಗಿದೆ. ಇದರಡಿ, ಆಯ್ದ 7,500 ವಿದ್ಯಾರ್ಥಿಗಳಿಗೆ ಉನ್ನತೀಕರಿಸಿದ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ನೀಡಲಾಗುವುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 5,267 ಶಿಕ್ಷಕರ ಹುದ್ದೆ, ಇಲಾಖೆಯಲ್ಲಿ ಖಾಲಿ ಇರುವ ಇತರೆ ಶಿಕ್ಷಕರ ಹುದ್ದೆಗಳನ್ನು ತರ್ಕಬದ್ಧಗೊಳಿಸಿ 5,000 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗುವುದು ಎನ್ನಲಾಗಿದೆ.
ಈಗಾಗಲೇ ರಾಜ್ಯದಲ್ಲಿರುವ 279 ಕರ್ನಾಟಕ ಪಬ್ಲಿಕ್ ಶಾಲೆಗಳ ಜೊತೆಗೆ ಈ ವರ್ಷ ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ ನೆರವಿನಲ್ಲಿ 2,500 ಕೋಟಿ ರು. ವೆಚ್ಚದಲ್ಲಿ ಇನ್ನೂ 500 ಹೊಸ ಕೆಪಿಎಸ್‌ಗಳು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಕ್ಷರ ಆವಿಷ್ಕಾರ ಯೋಜನೆಯಡಿ 200 ಕೋಟಿ ರು. ವೆಚ್ಚದಲ್ಲಿ ಆಯ್ದ 50 ಶಾಲೆಗಳನ್ನು ಸುಸಜ್ಜಿತ ಕೆಪಿಎಸ್‌ಗಳಾಗಿ ಉನ್ನತೀಕರಿಸಲಾಗವುದು. ಅರ್ಹ 100 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ, 50 ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸುವುದಾಗಿ ಘೋಷಿಸಲಾಗಿದೆ.