ಕರಾವಳಿಪುತ್ತೂರು

ನೇತ್ರಾವತಿ ಒಡಲಲ್ಲಿ ಎತ್ತಿನಹೊಳೆ ಪ್ರೀಮಿಯರ್‌ ಲೀಗ್‌ !

ನ್ಯೂಸ್‌ ನಾಟೌಟ್‌: ಜಿಲ್ಲೆಯ ಜೀವನದಿ ನೇತ್ರಾವತಿಯು ಉಪ್ಪಿನಂಗಡಿಯಲ್ಲಿ ಬತ್ತಿಹೋಗಿದ್ದು, ಜೀವನದಿಗಳನ್ನು ಬರಡಾಗಿಸುವ ಎತ್ತಿನಹೊಳೆ ಯೋಜನೆಯಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಭಾನುವಾರ ಉಪ್ಪಿನಂಗಡಿ ನೇತ್ರಾವತಿ ನದಿಯಲ್ಲಿ ಎನ್‌ಇಸಿಎಫ್‌ ವತಿಯಿಂದ ಎತ್ತಿನಹೊಳೆ ಪ್ರೀಮಿಯರ್‌ ಲೀಗ್‌ ಅಣಕು ಕ್ರಿಕೆಟ್‌ ಪಂದ್ಯಾಟ ಆಯೋಜಿಸಲಾಗಿತ್ತು.

ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರ ನದಿಗಳ ನೀರು ಅನಾವಶ್ಯಕವಾಗಿ ಸಮುದ್ರ ಸೇರುತ್ತಿದೆ ಎಂದು ಪ್ರತಿಪಾದಿಸಿ ಡಿ.ವಿ. ಸದಾನಂದ ಗೌಡ, ವೀರಪ್ಪ ಮೊಯ್ಲಿ ಅವಧಿಯಲ್ಲಿ ಎತ್ತಿನಹೊಳೆ ಯೋಜನೆ ಮಂಜೂರುಗೊಳಿಸಿದ್ದರು. ಇದೀಗ ನೀರಾವರಿ ಯೋಜನೆ ಪೂರ್ಣಗೊಂಡಿಲ್ಲ. ಅಲ್ಲದೆ ಎತ್ತಿನ ಹೊಳೆ ಜಲಪಾತ್ರಗಳೆಲ್ಲವೂ ಬರಿದಾಗಿದ್ದು, ಮಳೆಗಾಲದಲ್ಲಿ ಭೂಕುಸಿತ, ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತಿದೆ. ಅತ್ತ ಕೋಲಾರ, ಚಿತ್ರದುರ್ಗ ಸೇರಿದಂತೆ ಬಯಲು ಸೀಮೆ ಯಾವುದೇ ಪ್ರದೇಶಗಳಿಗೂ ನೀರು ತಲುಪಿಲ್ಲ. ಆದರೆ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು, ಗುತ್ತಿಗೆದಾರ ಜೇಬುತುಂಬಿದೆ ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬುದ್ದಿವಂತ ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳದಿರುವುದು ವಿಪರ್ಯಾಸ ಎಂದು ನ್ಯಾಷನಲ್‌ ಎನ್ವಿರಾನ್‌ಮೆಂಟ್‌ ಕೇರ್‌ ಫೌಂಡೇಶನ್‌ ಸಂಸ್ಥೆ ಮುಖ್ಯಸ್ಥ ದಿನೇಶ್‌ ಹೊಳ್ಳ ಹೇಳಿದರು.

ಸಂಸ್ಥೆಯ ಮುಂದಾಳು ಶಶಿಧರ ಶೆಟ್ಟಿ ಮಾತನಾಡಿ, ಪ್ರಾಕೃತಿಕವಾಗಿ ದೊರೆಯುವ ಶುದ್ಧ ನೀರಿನ ಮೂಲಗಳನ್ನು ಕೊಳಚೆ ಮಾಡಿ ಸಮುದ್ರದ ಉಪ್ಪು ನೀರನ್ನು ಸಿಹಿನೀರನ್ನಾಗಿಸುವ ದುಬಾರಿ ಯೋಜನೆ ಬಗ್ಗೆ ಸರ್ಕಾರಕ್ಕೆ ಆಸಕ್ತಿ ವಹಿಸಿರುವುದು ವಿಪರ್ಯಾಸ. ಈ ನಿಟ್ಟಿನಲ್ಲಿ ಜೀವನದಿಯ ಸ್ಥಿತಿಗೆ ಕಾರಣವಾದವರನ್ನು ಸಮಾಜಕ್ಕೆ ತಿಳಿಯಪಡಿಸುವ ಉದ್ದೇಶದಿಂದ ಕ್ರಿಕೆಟ್‌ ಪಂದ್ಯಾಟ ಆಯೋಜಿಸಲಾಗಿದೆ ಎಂದರು.

ಎತ್ತಿನ ಹೊಳೆ ಯೋಜನೆಯನ್ನು ಪರಿಚಯಿಸಿದ ವೀರಪ್ಪ ಮೊಯ್ಲಿ ಮತ್ತು ಡಿ.ವಿ ಸದಾನಂದ ಗೌಡ ಅವರನ್ನು ಅಣಕಿಸುವಂತೆ ನೀರಿನ ಹರಿವು ಇಲ್ಲದೆ ಒಣಗಿದ ನದಿ ಬಯಲಿನಲ್ಲಿ ಕ್ರಿಕೆಟ್‌ ಪಂದ್ಯಾಟ ಆಯೋಜಿಸಲಾಯಿತು. ನದಿ ಬಯಲಿಗೆ ವೀರಪ್ಪ ಸದಾನಂದ ಕ್ರೀಡಾಂಗಣವೆಂದು ನಾಮಕರಣ ಮಾಡಲಾಯಿತು. ಎಲ್ಲ ರಾಜಕೀಯ ಪಕ್ಷಗಳ ವಿವಿಧ ರಾಜಕಾರಣಿಗಳ ಮುಖವಾಡ ಧರಿಸಿ ಕ್ರಿಕೆಟ್‌ ಆಡಲಾಯಿತು. ಬಳಿಕ ಬಹುಮಾನವಾಗಿ ಬಕೆಟ್‌ ನೀರನ್ನು ನೀಡಲಾಯಿತು.

ಪರಿಸರ ಆಸಕ್ತರು, ಸಂಘಟನೆ ಪ್ರಮುಖರಾದ ಭುವನ್‌, ಬೆನಡಿಕ್ಟ್‌ ಫೆರ್ನಾಂಡಿಸ್‌, ಜೀತ್‌ ಮಿಲನ್‌ ರೋಚ್‌, ನಾಗರಾಜ್‌, ಸೆಲ್ಮಾ, ಜಯಪ್ರಕಾಶ್‌, ಮಧುಸೂಧನ್‌, ಹರೀಶ್‌ ರಾಜ್‌ಕುಮಾರ್‌, ಅವಿನಾಶ್‌ ಭಿಡೆ, ಇರ್ಷಾದ್‌ ಮೊದಲಾದವರಿದ್ದರು.

Related posts

ದಕ್ಷಿಣ ಕನ್ನಡದಿಂದ ಕೇರಳಕ್ಕೆ ಇನ್ನೆರಡು ತಿಂಗಳು ಪ್ರವೇಶವಿಲ್ಲ, ಆಗಮನ ಹಾಗೂ ನಿರ್ಗಮನ ನಿಷೇಧ: ಜಿಲ್ಲಾಧಿಕಾರಿ ಆದೇಶ

ಕ್ರಿಪ್ಟೋ ಕರೆನ್ಸಿ ಹೂಡಿಕೆ ಹೆಸರಲ್ಲಿ ಕೋಟ್ಯಂತರ ರೂ. ವಂಚಿಸಿದಾತನ ಬಂಧನ

ಜೊತೆಗಿದ್ದವನ ಶವವನ್ನು 2 ವರ್ಷ ಪ್ರಿಡ್ಜ್ ನಲ್ಲಿಟ್ಟ ಭೂಪ!,ಆತನ ಹಣವನ್ನೇ ಸ್ವಂತ ಖರ್ಚಿಗೆ ಬಳಸಿಕೊಂಡ!