ನ್ಯೂಸ್ ನಾಟೌಟ್: ಮದುವೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವಾಗಲೇ ಅವಘಡವೊಂದರಲ್ಲಿ ಯುವತಿಯೊಬ್ಬಳು ತನ್ನ ಭಾವಿ ಪತಿಯ ಎದುರೇ ದುರಂತ ಅಂತ್ಯ ಕಂಡಿದ್ದಾಳೆ.
ಪ್ರಿಯಾಂಕಾ (24) ನತದೃಷ್ಟ ಯುವತಿ ಎಂದು ಗುರುತಿಸಲಾಗಿದೆ.
ದೆಹಲಿಯ ಚಾಣಕ್ಯಪುರಿಯ ಸೇಲ್ಸ್ ಮ್ಯಾನೇಜರ್ ಆಗಿರುವ ಪ್ರಿಯಾಂಕಾಗೆ ನಿಖಿಲ್ ಎಂಬ ಯುವಕನ ಜೊತೆ ಮದುವೆ ನಿಶ್ಚಯವಾಗಿತ್ತು. ಅದರಂತೆ ಮುಂದಿನ ವರ್ಷ ಫೆಬ್ರವರಿಯಲ್ಲಿ ಮದುವೆ ನಿಗದಿಯಾಗಿತ್ತು.
ಈ ನಡುವೆ ಪ್ರಿಯಾಂಕಾ ಹಾಗೂ ನಿಖಿಲ್ ಒಟ್ಟಾಗಿ ತಿರುಗಾಡುವ ಯೋಚನೆ ನಡೆಸಿದ್ದಾರೆ. ಅದರಂತೆ ಕಳೆದ ಬುಧವಾರ(ಎ.2) ಕಪಶೇರಾ ಬಳಿ ಇರುವ ಫನ್ ಅಂಡ್ ಫುಡ್ ವಿಲೇಜ್ ಹೆಸರಿನ ಅಮ್ಯೂಸ್ ಮೆಂಟ್ ಪಾರ್ಕ್ ಗೆ ತೆರಳಿದ್ದಾರೆ. ಇಲ್ಲಿ ಕೆಲ ಹೊತ್ತು ಮೋಜು ಮಾಡಿದ ಜೋಡಿ, ಬಳಿಕ ಅಲ್ಲಿದ್ದ ರೋಲರ್-ಕೋಸ್ಟರ್ ರೈಡ್ ಮಾಡಲು ಮುಂದಾಗಿದ್ದಾರೆ. ಸವಾರಿ ಮಾಡುತ್ತಿದ್ದ ವೇಳೆ ಅದರ ಸ್ಟಾಂಡ್ ಮುರಿದು ಪ್ರಿಯಾಂಕಾ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.
ಕೂಡಲೇ ನಿಖಿಲ್, ಪ್ರಿಯಾಂಕಾಳನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆದರೆ ಆಸ್ಪತ್ರೆಯಲ್ಲಿ ಪರಿಶೀಲಿಸಿದ ವೈದ್ಯರು ಪ್ರಿಯಾಂಕಾ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ವೈದ್ಯರ ಮಾತು ಕೇಳಿ ನಿಖಿಲ್ ಆಘಾತಕ್ಕೆ ಒಳಗಾಗಿದ್ದಾನೆ. ಬಳಿಕ ವಿಚಾರವನ್ನು ಪ್ರಿಯಾಂಕಾ ಮನೆಯವರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ನಿಖಿಲ್ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಪ್ರಿಯಾಂಕಾ ಮೃತದೇಹವನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.