ನ್ಯೂಸ್ ನಾಟೌಟ್: ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಹಾಗೂ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ನಡುವಿನ ಮುಸುಕಿನ ಗುದ್ದಾಟ ತೀವ್ರಗೊಂಡಿದೆ. ಇತ್ತೀಚೆಗೆ ಎಲಾನ್ ಮಸ್ಕ್‌ಗೆ ಅಂಗಡಿ ಮುಚ್ಚಿ ಹೋಗುವಂತೆ ಟ್ರಂಪ್ ಪರೋಕ್ಷ ಎಚ್ಚರಿಕೆ ನೀಡಿದ್ದರು. ಈಗ ಅಮೆರಿಕಾದಲ್ಲಿ ಟ್ರಂಪ್‌ಗೆ ತಿರುಗೇಟು ನೀಡಲು ಎಲಾನ್ ಮಸ್ಕ್ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದು, ಅದಕ್ಕೆ ಅಮೆರಿಕಾ ಪಾರ್ಟಿ ಎಂಬ ಹೆಸರಿಟ್ಟಿದ್ದಾರೆ.
ಅಮೆರಿಕ ಪಾರ್ಟಿ ಎಂಬ ಹೊಸ ರಾಜಕೀಯ ಪಕ್ಷವನ್ನು ಅಮೆರಿಕಾದಲ್ಲಿ ಸ್ಥಾಪಿಸಿರುವುದಾಗಿ ಎಲಾನ್ ಮಸ್ಕ್ ಅಧಿಕೃತವಾಗಿ ನಿನ್ನೆ ಘೋಷಣೆ ಮಾಡಿದ್ದಾರೆ. ಅಮೆರಿಕಾದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒನ್ ಬಿಗ್ ಬ್ಯೂಟಿಫುಲ್ ಮಸೂದೆಗೆ ಸಹಿ ಹಾಕಿದ ಮರು ದಿನವೇ ಟೆಕ್ ದೈತ್ಯ ಎಲಾನ್ ಮಸ್ಕ್ ಈ ಹೊಸ ರಾಜಕೀಯ ಪಕ್ಷವನ್ನು ಘೋಷಣೆ ಮಾಡಿದ್ದಾರೆ.
ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಯೂ ಎನಿಸಿರುವ ಎಲಾನ್ ಮಸ್ಕ್ ಕಳೆದ ವರ್ಷ ನಡೆದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ಅತ್ಯಾಪ್ತ ಬೆಂಬಲಿಗರಲ್ಲಿ ಒಬ್ಬರಾಗಿದ್ದರು. ಜೊತೆಗೆ ಟ್ರಂಪ್ ಅವರ ಪಕ್ಷಕ್ಕೆ ಅತೀ ಹೆಚ್ಚು ದಾನ ನೀಡಿದವರಲ್ಲಿ ಒಬ್ಬರೆನಿಸಿದ್ದರು. ಆದರೆ ಫೆಡರಲ್ ವೆಚ್ಚದಲ್ಲಿ ಕಡಿತ ಹಾಗೂ ಸರ್ಕಾರಿ ಉದ್ಯೋಗ ಕಡಿತ ಸೇರಿದಂತೆ ಹಲವು ವಿವಾದಾತ್ಮಕ ಅಂಶಗಳನ್ನು ಹೊಂದಿರುವ ಒನ್ ಬಿಗ್ ಬ್ಯೂಟಿಫುಲ್ ಮಸೂದೆ ವಿಚಾರವಾಗಿ ಈ ಇಬ್ಬರು ನಾಯಕರು ಕುಸ್ತಿಗಿಳಿದಿದ್ದು, ಈ ಇಬ್ಬರು ನಾಯಕರ ನಡುವಣ ಕಿತ್ತಾಟ ಜಾಗತಿಕ ಮಟ್ಟದಲ್ಲಿ ದೊಡ್ಡಸುದ್ದಿಯಾಗಿತ್ತು. ಆದರೆ ಈಗ ಎಲಾನ್ ಮಸ್ಕ್ ಹೊಸ ಪಕ್ಷ ಸ್ಥಾಪಿಸುವ ಮೂಲಕ ಟ್ರಂಪ್‌ಗೆ ತಿರುಗೇಟು ನೀಡಿದ್ದಾರೆ.
ಪಕ್ಷ ಸ್ಥಾಪಿಸುವುದಕ್ಕೂ ಮೊದಲು ಎಲಾನ್ ಮಸ್ಕ್ ಟ್ವಿಟ್ಟರ್‌ನಲ್ಲಿ ಜನರ ಅಭಿಪ್ರಾಯ ಕೇಳುವುದಕ್ಕಾಗಿ ವೋಟಿಂಗ್ ಮಾಡಲು ಅವಕಾಶ ಇರುವ ಪೋಸ್ಟೊಂದನ್ನು ಹಾಕಿದ್ದರು. ಅದರಲ್ಲಿ ಸ್ವಾತಂತ್ರ್ಯ ದಿನವು ಎರಡು ಪಕ್ಷಗಳ (ಕೆಲವರು ಏಕಪಕ್ಷೀಯ ಎಂದು ಹೇಳುತ್ತಾರೆ) ವ್ಯವಸ್ಥೆಯಿಂದ ಸ್ವಾತಂತ್ರ್ಯ ಬೇಕೇ ಎಂದು ಕೇಳಲು ಸೂಕ್ತ ಸಮಯ. ನಾವು ಅಮೇರಿಕಾ ಪಕ್ಷವನ್ನು ರಚಿಸಬೇಕೇ? ಎಂದು ಕೇಳಿದರು. ಸಮೀಕ್ಷೆಯಲ್ಲಿ 65.4% ಜನರು ಹೌದು ಮತ್ತು 34.6% ಜನರು ಇಲ್ಲ ಎಂದು ಮತ ಚಲಾಯಿಸಿದ್ದರು. ಇದಾದ ನಂತರ ಎಲಾನ್ ಮಸ್ಕ್ ಈಗ ಹೊಸ ಅಮೆರಿಕ ಪಕ್ಷವನ್ನು ಸ್ಥಾಪಿಸಿದ್ದು, ಇಂದು, ನಿಮ್ಮ ಸ್ವಾತಂತ್ರ್ಯವನ್ನು ಮರಳಿ ನೀಡಲು ಅಮೆರಿಕಾ ಪಕ್ಷವನ್ನು ರಚಿಸಲಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.