ನ್ಯೂಸ್ ನಾಟೌಟ್: ಬೇಡಿಕೆ ಈಡೇರಿಸದ ರಾಜಕಾರಣಿಗಳ ಮೇಲೆ ಆಕ್ರೋಶಗೊಂಡ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಸೇತುವೆ ಕಟ್ಟಿ ಶ್ರಮದಾನ ಮಾಡಿದ ಅಪರೂಪದ ವಿದ್ಯಮಾನ ಕಡಬ ತಾಲೂಕಿನಿಂದ ವರದಿಯಾಗಿದೆ.
ಸುಳ್ಯ ವಿಧಾನಸಬಾ ಕ್ಷೇತ್ರದ ಮತದಾರರ ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಐನೆಕಿದು ಗ್ರಾಮದ ಕುಜುಂಬಾರ್ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಹಲವಾರು ವರ್ಷಗಳಿಂದ ಬೇಡಿಕೆ ಇತ್ತು. ಆದರೆ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿರಲಿಲ್ಲ. ಇದರಿಂದ ನೊಂದ ಗ್ರಾಮಸ್ಥರು ಚುನಾವಣೆಗೂ ಮುನ್ನವೇ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದರು. ಆದರೆ ಯಾವೊಬ್ಬರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಊರಿನ ಜನ ಇದೀಗ ಚುನಾವಣೆಯ ದಿನವೇ ಮರದ ಸಂಕ ನಿರ್ಮಿಸಿದ್ದಾರೆ.
ಕುಜುಂಬಾರು ಪರಿಸರದ ಸುಮಾರು 30 ಮನೆಗಳ 80 ಕ್ಕೂ ಅಧಿಕ ಜನರು ಮತ ಚಲಾಯಿಸಿಲ್ಲ ಎಂದು ವರದಿಯಾಗಿದೆ. ಹೊಳೆಗೆ ಸಂಪರ್ಕ ಕಲ್ಪಿಸುವ ಪಾಲ ನಿರ್ಮಾಣದಲ್ಲಿ ಶ್ರಮಸೇವೆ ನಡೆಸಿ ಸಂಬಂಧಿಸಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಚುನಾವಣೆ ಮಾತ್ರವಲ್ಲ ಮುಂದೆಯೂ ಸೇತುವ ನಿರ್ಮಾಣ ಆಗದಿದ್ದರೆ ಮುಂಬರುವ ಸಂಸದೀಯ ಚುನಾವಣೆಯವನ್ನೂ ಬಹಿಷ್ಕರಿಸಲಾಗುತ್ತದೆ ಎಂದು ಊರಿನವರು ಎಚ್ಚರಿಕೆಯನ್ನು ನೀಡಿದ್ದಾರೆ.