ನ್ಯೂಸ್ ನಾಟೌಟ್: ಸತ್ತ ಮನುಷ್ಯರಿಗೆ ತಿಥಿ ಮಾಡುವುದು ಸಂಪ್ರದಾಯವಿದೆ . ಆದರೆ, ಇಲ್ಲೊಂದು ಕುಟುಂಬ ಮೃತಪಟ್ಟ ತಮ್ಮ ಪ್ರೀತಿಯ ಶ್ವಾನಕ್ಕೆ ತಿಥಿ ಕಾರ್ಯ ನೆರವೇರಿಸಿದ್ದಲ್ಲದೆ, ಗ್ರಾಮಸ್ಥರಿಗೆ ಊಟ ಬಡಿಸಿದ ಘಟನೆ ಹುಣಸೂರುತಾಲೂಕಿನ ತೊಂಡಾಳು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಬಿಳಿಕೆರೆ ಹೋಬಳಿಯ ತೊಂಡಾಳು ಗ್ರಾಮದ ಜವರಯ್ಯ-ಸಾಕಮ್ಮ ಅವರ ಮನೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸುಬ್ಬ (ಮರಲಿಂಗಿ) ಎಂಬ ಹೆಸರಿನ ನಾಯಿ ಇತ್ತು. ಇದು ಇಡೀ ಆ ಬೀದಿಯ ಜನಕ್ಕೆ ಪ್ರೀತಿ ಪಾತ್ರವಾಗಿತ್ತು. ಯಾರಿಗೂ ತೊಂದರೆ ಕೊಡದೆ ಇದ್ದುದ್ದರಿಂದ ಪ್ರತಿಯೊಬ್ಬರಿಗೂ ಸುಬ್ಬ ಅಚ್ಚುಮೆಚ್ಚಿನ ನಾಯಿಯಾಗಿತ್ತು.
ಬೀದಿಯಲ್ಲಿ ಯಾರೇ ಕರೆದರೂ ಅವರೊಂದಿಗೆ ಹೊಲ, ನದಿ ಕಡೆ ಹಗಲು-ರಾತ್ರಿ ಎನ್ನದೆ ಕರೆದಾಗ ಒಟ್ಟಿಗೆ ಬರುತ್ತಿತ್ತು.
ಈ ನಡುವೆ ಸುಬ್ಬು ಆರು ತಿಂಗಳ ಗರ್ಭಿಣಿಯಾಗಿತ್ತು. ಮೇ 21ರಂದು ಯಾರೋ ಕಿಡಿಗೇಡಿಗಳು ಸುಬ್ಬನ ಹೊಟ್ಟೆಗೆ ಕಲ್ಲಿನಿಂದ ಬಲವಾಗಿ ಹೊಡೆದು ಬಾಯಿಯಿಂದ ರಕ್ತ ವಾಂತಿಮಾಡಿ ಸತ್ತಿತ್ತು.. ಇದರಿಂದ ನೊಂದ ಗ್ರಾಮದ ಜನರು ಬುಧವಾರ ಸುಬ್ಬನನ್ನು ಮಣ್ಣು ಮಾಡಿದ ಸ್ಥಳದಲ್ಲಿ ಹೊಸ ಬಟ್ಟೆ ಹೊದೆಸಿ, ಹೂಮಾಲೆ ಹಾಕಿ, ಹಾಲು-ತುಪ್ಪ ಎರೆದು, ಪೂಜೆ ಸಲ್ಲಿಸಿ ಶ್ವಾನ ಪ್ರೀತಿ ಮೆರೆದಿದ್ದಾರೆ. ಈವೇಳೆ ಗ್ರಾಮಸ್ಥರು ಸುಬ್ಬನ ಸಮಾದಿಗೆ ಪೂಜೆ ಸಲ್ಲಿಸಿ ತಿಥಿಯೂಟವನ್ನು ಕೂಡ ಊರವರಿಗೆ ನೀಡಿದ್ದು ವಿಶೇಷವಾಗಿತ್ತು.