ನ್ಯೂಸ್ ನಾಟೌಟ್: ಇಡೀ ರಾಷ್ಟ್ರವೇ ಇದೀಗ ಧರ್ಮಸ್ಥಳ ಗ್ರಾಮದತ್ತ ಚಿತ್ತವಹಿಸಿದೆ. ದೇಶ-ವಿದೇಶಗಳಿಂದಲೂ ಜನ ಮಣ್ಣಿನೊಳಗೆ ದೂರುದಾರ ಅನಾಮಿಕ ವ್ಯಕ್ತಿ ಹೇಳಿರುವ ತಲೆಬುರುಡೆ, ಮೂಳೆಗಳು ಸಿಗುತ್ತದೆಯೇ ಎನ್ನುವ ಕುತೂಹಲದಲ್ಲಿದ್ದಾರೆ. ಸದ್ಯ ಎರಡು ದಿನದ ಕಾರ್ಯಾಚರಣೆ ನಡೆದಿದೆ. ಇಲ್ಲಿ ತನಕ ಏನೆಲ್ಲ ಬೆಳವಣಿಗೆ ನಡೆದಿದೆ ಅನ್ನುವುದರ ಬಗೆಗಿನ ಸಂಕ್ಷಿಪ್ತ ವರದಿ ಇಲ್ಲಿದೆ ಓದಿ.
ದೂರುದಾರ ಅನಾಮಿಕ ವ್ಯಕ್ತಿ ನೀಡಿದ ಹೇಳಿಕೆ ಮೇರೆಗೆ ಇದುವರೆಗೆ ಒಟ್ಟು 13 ಜಾಗದ ಮಾರ್ಕ್ ಮಾಡಲಾಗಿದೆ. 2ನೇ ದಿನದ ಅಂತ್ಯದ ಕಾರ್ಯಾಚರಣೆ ವೇಳೆಗೆ 4 ಸ್ಥಳಗಳ ಶೋಧನೆ ನಡೆದಿದೆ. ಯಾವುದೇ ರೀತಿಯ ತಲೆಬುರುಡೆಯಾಗಲಿ ಅಥವಾ ಮೂಳೆಗಳು ಸಿಕ್ಕಿರುವುದಿಲ್ಲ. ಆದರೆ ಎರಡನೇ ದಿನದ ಕಾರ್ಯಾಚರಣೆಯ ನಂತರ ಕೆಲವೊಂದು ಸಾಕ್ಷಿಗಳು ಎಸ್ ಐಟಿ ತನಿಖಾಧಿಕಾರಿಗಳಿಗೆ ಸಿಕ್ಕಿದೆ ಎನ್ನಲಾಗಿದೆ. ಈ ಪ್ರಕಾರವಾಗಿ ನೋಡುವುದಾದರೆ ಹರಿದ ರವಿಕೆ, ಪಾನ್ ಅಥವಾ ಎಟಿಎಂ ಕಾರ್ಡ್ ಸಿಕ್ಕಿದೆ ಅನ್ನುವುದು ಖಚಿತಗೊಂಡಿದೆ. ಇದು ತನಿಖೆಗೆ ಯಾವ ರೀತಿಯಲ್ಲಿ ಸಹಕಾರ ನೀಡುವುದು ಅನ್ನುವುದು ಗೊತ್ತಿಲ್ಲ. ತನಿಖೆಯ ಭಾಗವಾಗಿ ಮಾತ್ರ ಇದನ್ನು ಎಸ್ಐಟಿ ಅಧಿಕಾರಿಗಳು ಪರಿಗಣಿಸುವ ಸಾಧ್ಯತೆ ಇದೆ. ಹಾಗಂತ ಇದನ್ನೇ ಸಾಕ್ಷಿ ಎಂದು ಈಗಲೇ ಹೇಳುವುದಕ್ಕೆ ಬರುವುದಿಲ್ಲ. ಧರ್ಮಸ್ಥಳಕ್ಕೆ ದಿನನಿತ್ಯ ಸಾವಿರಾರು ಯಾತ್ರಾರ್ಥಿಗಳು ಬರುತ್ತಿರುತ್ತಾರೆ. ಅವರು ನೇತ್ರಾವತಿ ಸ್ನಾನ ಘಟ್ಟಕ್ಕೆ ಹೋದಾಗ ಅಲ್ಲಿ ಬಿಸಾಕಿದಂತಹ ರವಿಕೆ ಮಣ್ಣಿನಡಿಗೆ ಹೂತು ಹೋಗಿದ್ದರಿರಬಹುದು, ಪಾನ್ ಕಾರ್ಡ್ ಅಥವಾ ಎಟಿಎಂ ಕಾರ್ಡ್ ಸಿಕ್ಕಿದೆ ಎಂದು ಹೇಳಲಾಗಿದೆ. ಇದು ಲ್ಯಾಮಿನೇಷನ್ ಆಗಿದ್ದರಿಂದ ಮಣ್ಣಿನಡಿಯಲ್ಲಿ ಬಿದ್ದು ಹಾಳಾಗಿಲ್ಲ. ಅದು ಕೂಡ ಯಾತ್ರಾರ್ಥಿಗಳದ್ದೇ ಆಗಿರುವ ಸಾಧ್ಯತೆಯೂ ಇದೆ. ಇನ್ನೊಂದು ಕಾಕತಾಳೀಯವೆಂದರೆ ಈ ಹಿಂದೆ 2009ರಲ್ಲಿ ಧರ್ಮಸ್ಥಳದಲ್ಲಿ ಲಕ್ಷ್ಮೀ ಅನ್ನುವವರ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಮೃತಪಟ್ಟ ಲಕ್ಷ್ಮೀ ಹೆಸರಲ್ಲೇ ಕಾರ್ಡ್ ಮಣ್ಣಿನಡಿ ಸಿಕ್ಕಿರುವುದರಿಂದ ಅವರೇ ಇವರು ಇರಬಹುದಾ..? ಅನ್ನುವ ರೀತಿಯಲ್ಲೂ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಎಸ್ ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಸದ್ಯ ಅನಾಮಿಕ ದೂರುದಾರ ಹೇಳಿರುವ ರೀತಿಯಲ್ಲೇ ತನಿಖೆ ನಡೆಯುತ್ತಿದೆ. ನೇತ್ರಾವತಿ ನದಿ ತೀರದ ಕಾಡು ಬಂಗ್ಲೆಗುಡ್ಡೆ ಬಳಿ ಐದು ಪಾಯಿಂಟ್ ಗಳಲ್ಲಿಶೋಧ ನಡೆಯುತ್ತಿದೆ. ಎಲ್ಲಿಯೂ ತಲೆಬುರುಡೆ, ಮೂಳೆಗಳು ಸಿಗದಿದ್ದರೂ ಆತ ಮಾತ್ರ ಆತ್ಮಸ್ಥೈರ್ಯ ಕಳೆದುಕೊಂಡಂತೆ ಕಂಡು ಬರುತ್ತಿಲ್ಲ. ಎಸ್ಐಟಿ ಎದುರು ಕೂಡ ನಾನು ಹೇಳುತ್ತಿರುವುದು ಸತ್ಯ, ಇಲ್ಲಿಯೇ ಹೂತಿದ್ದೇನೆ ಎಂದು ಪದೇ ಪದೇ ಹೇಳುತ್ತಿದ್ದಾನೆ. ಜನರಿಗೂ ಸದ್ಯ ಸಿಟ್ಟು ಬರುತ್ತಿದೆ. ಎರಡು ದಿನದಿಂದ ಏನೂ ಸಿಕ್ಕಿಲ್ಲ ಅನ್ನುವ ಕೋಪ ನೆತ್ತಿಗೇರುತ್ತಿದೆ. ಈ ಹಂತದಲ್ಲಿ ಆತ ಸುಳ್ಳು ಹೇಳುತ್ತಿದ್ದಾನೆ ಎಂದು ಖಚಿತವಾಗಿ ಈಗಲೇ ಹೇಳುವುದು ಕಷ್ಟ. ಏಕೆಂದರೆ ಆತ ಇದುವರೆಗೆ ದೂರು ನೀಡಿದ ಬಳಿಕ ಎಸ್ಐಟಿ ಎದುರು ಸತತ 15 ಗಂಟೆ ವಿಚಾರಣೆ ಎದುರಿಸಿದ್ದಾನೆ. ನ್ಯಾಯಾಧೀಶರ ಎದುರು 164ರ ಅಡಿಯಲ್ಲಿಹೇಳಿಕೆಯನ್ನೂ ನೀಡಿದ್ದಾನೆ, ಸ್ಥಳೀಯ ಪೊಲೀಸರ ವಿಚಾರಣೆಯನ್ನೂ ಎದುರಿಸಿದ್ದಾನೆ. ತನಿಖೆಗೆ ಸಾಕ್ಷಿಯಾಗಿ ಹೂತಿದ್ದ ತಲೆ ಬುರುಡೆ, ಮೂಳೆಗಳನ್ನು ಕೂಡ ಹುಡುಕಿ ತಂದು ನೀಡಿದ್ದಾನೆ. ಈ ತಲೆಬುರುಡೆ, ಮೂಳೆಯ ಬಗ್ಗೆಯೂ ಎಸ್ ಐಟಿ ತನಿಖೆ ನಡೆಸುತ್ತಿದೆ. ಹೀಗಾಗಿ ಆತ ಹೇಳುತ್ತಿರುವುದು ಪೂರ್ಣ ಸುಳ್ಳು ಎಂದು ಈಗಲೇ ನಾವು ಖಚಿತವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ.
ಕೇಂದ್ರ ಸೇವೆಗೆ ಪ್ರಣವ್ ಮೊಹಂತಿ..?
ಸದ್ಯ ತನಿಖೆ ನಡೆಸುತ್ತಿರುವ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರನ್ನು ಸರ್ಕಾರ ಕೇಂದ್ರ ಸೇವೆಗೆ ನಿಯೋಜಿಸಿದೆ. ನೂರಾರು ಶವಗಳ ಹೂತ್ತಿಟ್ಟ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲೇ ಅವರು ಕೇಂದ್ರ ಸೇವೆಗೆ ನಿಯೋಜನೆಗೊಂಡರೆ ಪ್ರಕರಣದ ದಿಕ್ಕೇನು..? ಅನ್ನುವ ಬಗ್ಗೆ ಸಾರ್ವಜನಿಕರಿಗೆ ಅನುಮಾನವಿದೆ. ಕೇಂದ್ರ ಸೇವೆಗೆ ನಿಯೋಜನೆ ಬಳಿಕವೂ ಅವರು ತನಿಖೆಯ ಭಾಗವಾಗಿ ಎಸ್ಐಟಿಯಲ್ಲಿ ಇರುತ್ತಾರಾ..? ಅನ್ನುವ ಪ್ರಶ್ನೆಗೆ ಈಗ ಸ್ಪಷ್ಟ ಉತ್ತರ ಸಿಗಬೇಕಿದೆ. ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಡಾ. ಪರಮೇಶ್ವರ್ ಅವರು, ‘ಕೇಂದ್ರ ಸೇವೆಗೆ ನಿಯೋಜನೆ ಬಳಿಕವೂ ಎಸ್ ಐಟಿಯಲ್ಲಿ ಮುಂದುವರಿಯುತ್ತಾರಾ ಅನ್ನುವುದನ್ನು ನೋಡುತ್ತೇವೆ. ಇಲ್ಲದಿದ್ದರೆ ಇನ್ನೊಬ್ಬರಿಗೆ ಅವಕಾಶ ನೀಡುವ ಕುರಿತು ಯೋಚನೆ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮತ್ತೊಂದು ಸ್ಫೋಟಕ ವಿಚಾರವೊಂದು ಹರಿದಾಡುತ್ತಿದೆ. ಅಂದಿನ ದಿನಗಳಲ್ಲಿ ಈ ಕೆಲಸ ಮಾಡಲು ಪೊಲೀಸ್ ಅಧಿಕಾರಿಯೊಬ್ಬರು ಸಾಥ್ ನೀಡಿದ್ದಾರೆಂದು ಅನಾಮಿಕ ವ್ಯಕ್ತಿ ಹೇಳಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಂದು ಪೊಲೀಸ್ ಅಧಿಕಾರಿಯಾಗಿ ಯಾರೆಲ್ಲ ಇದ್ದರು ಅವರನ್ನೆಲ್ಲ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯೂ ಇದೆ. ಅಲ್ಲದೆ ಇತ್ತೀಚೆಗೆ ಪ್ರೆಸ್ ಮೀಟ್ ಮಾಡಿದ ಧರ್ಮಸ್ಥಳ ಗ್ರಾಮ ಪಂಚಾಯತ್ ಗೂ ನೋಟಿಸ್ ನೀಡಲಾಗಿದೆ. ಅಂದಿನ ದಿನ ಎಷ್ಟು ದೇಹಗಳನ್ನು ಎಲ್ಲೆಲ್ಲಿ ಮಣ್ಣು ಮಾಡಿದ್ದೀರಿ, ಅದಕ್ಕೆ ಎಲ್ಲಿಂದ ಅನುಮತಿ ತೆಗೆದುಕೊಂಡಿದ್ದೀರಿ, ಮೃತದೇಹಗಳು ಗಂಡು ಅಥವಾ ಹೆಣ್ಣು ಸೇರಿದಂತೆ ಇತರೆ ಎಲ್ಲ ಮಾಹಿತಿ ಸಂಗ್ರಹಿಸುವ ಕೆಲಸವನ್ನು ಎಸ್ ಐಟಿ ತಂಡ ಮಾಡಿದೆ ಎಂದು ತಿಳಿದು ಬಂದಿದೆ.
ಈ ಪ್ರಕರಣವನ್ನು ಎಸ್ಐಟಿ (ವಿಶೇಷ ತನಿಖಾ ತಂಡ) ಗಂಭೀರವಾಗಿ ತೆಗೆದುಕೊಂಡಿದೆ. ಅನಾಮಿಕ ವ್ಯಕ್ತಿ ಹೇಳಿರುವ ರೀತಿಯಲ್ಲೇ ಗುಂಡಿ ಅಗೆದು ತನಿಖೆ ನಡೆಸುತ್ತಿದೆ. ಸದ್ಯದ ತನಕದ ಅಪ್ಡೇಟ್ ಇದೆ. ಮುಂದೆ ಏನೆಲ್ಲ ನಡೆಯಬಹುದು ಎನ್ನುವುದನ್ನು ಕಾದು ನೋಡಬೇಕಿದೆ.