ನ್ಯೂಸ್ ನಾಟೌಟ್: ಅನಾಮಿಕ ವ್ಯಕ್ತಿಯ ಹೇಳಿಕೆ ಆಧರಿಸಿ ಧರ್ಮಸ್ಥಳ ಗ್ರಾಮದ ಸುತ್ತಮುತ್ತಲಿನ ಕಾಡುಗಳಲ್ಲಿ ಮಣ್ಣು ಅಗೆದು ಹೂತಿಟ್ಟ ದೇಹಗಳಿಗಾಗಿ ಶೋಧ ನಡೆದಿತ್ತು. ಇದೀಗ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ಅಧಿಕಾರಿಗಳಿಂದ ಶನಿವಾರ ಯಾವುದೇ ಶೋಧ ಕಾರ್ಯ ನಡೆಯಲಿಲ್ಲ. ಬದಲಾಗಿ ಅಧಿಕಾರಿಗಳು ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ಅನಾಮಿಕನನ್ನು ಸಾಕಷ್ಟು ಹೊತ್ತು ವಿಚಾರಣೆ ನಡೆಸಿದರು ಎಂದು ತಿಳಿದು ಬಂದಿದೆ.
ಶನಿವಾರ ಅನಾಮಿಕ ಗುರುತಿಸಿದ ನೇತ್ರಾವತಿ ನದಿ ತೀರದ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿಯಲಿದೆ ಎಂಬ ಮಾಹಿತಿ ಇತ್ತಾದರೂ, ತನಿಖಾ ತಂಡದ ಯಾವುದೇ ಅಧಿಕಾರಿ ಗಳಾಗಲಿ, ಅನಾಮಿಕನಾಗಲಿ ಆಗಮಿಸಲಿಲ್ಲ. ಬೆಳ್ತಂಗಡಿ ಕಚೇರಿಯಲ್ಲಿದ್ದ ಅಧಿಕಾರಿಗಳು ಮೂರು ಗಂಟೆಗೂ ಅಧಿಕ ಹೊತ್ತು ಆನಾಮಿಕನನ್ನು ವಿಚಾರಣೆ ನಡೆಸಿದರು ಎನ್ನಲಾಗಿದೆ.
ಅನಾಮಿಕ ತೋರಿಸಿದ ಬಹುತೇಕ ಎಲ್ಲ ಸ್ಥಳಗಳಲ್ಲೂ ಉತ್ಖನನ ಕಾರ್ಯ ನಡೆದಿದ್ದು, ಯಾವುದೇ ಮಹತ್ವದ ಸಾಕ್ಷಿಗಳು ಲಭ್ಯವಾಗಿಲ್ಲ. ಹಾಗಾಗಿ ಆತನ ಮಂಪರು ಪರೀಕ್ಷೆಯ ಪ್ರಸ್ತಾವ ಕೇಳಿಬಂದಿತ್ತು. ಆದರೆ ಶನಿವಾರ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಎಸ್‌ಐಟಿ ತಂಡ ಜಿತೇಂದ್ರ ಕುಮಾರ್ ದಯಾಮ ವಿಚಾರಣೆ ನಡೆಸಿದ್ದು, ಆತನ ಹಿನ್ನೆಲೆಯ ಕುರಿತು ಮತ್ತಷ್ಟು ಮಾಹಿತಿ ಕಲೆ ಹಾಕಿದೆ ಎಂದು ಮೂಲಗಳು ತಿಳಿಸಿದೆ.
ಜತೆಗೆ ಎಸ್‌ಐಟಿ ತಂಡ ಆತ ಕೆಲಸ ಮಾಡುತ್ತಿದ್ದ ಸಂದರ್ಭ ಆತನ ಜತೆ ಯಾರ್ಯಾರು ಕೆಲಸ ಮಾಡಿದ್ದಾರೆ, ಈಗ ಅವರು ಎಲ್ಲಿದ್ದಾರೆ, ಈತನ ಸಂಪರ್ಕದಲ್ಲಿದ್ದಾರೆಯೇ ಎಂಬ ಮಾಹಿತಿಯನ್ನೂ ಕಲೆ ಹಾಕಿದೆ. ಈ ಬಗ್ಗೆ ಆತನ ಜತೆಗಿದ್ದ ಕೆಲ ವ್ಯಕ್ತಿಗಳನ್ನು ಅಧಿಕಾರಿಗಳೇ ಸಂಪರ್ಕಿಸಿದ್ದಾರೆಯೇ ಎಂಬುದರ ಕುರಿತು ಖಚಿತಪಡಿಸಿಲ್ಲ. ಈ ಬಗೆಗಿನ ಗೊಂದಲವನ್ನು ಪರಿಹರಿಸಲು ಮುಂದೆ ಎಸ್ ಐಟಿ ಅಧಿಕಾರಿಗಳು ಜನರ ಮುಂದೆ ಇಡುವ ಅಗತ್ಯತೆ ಇದೆ.