ನ್ಯೂಸ್ ನಾಟೌಟ್:ದೇವರಿಗೆ ಯಾವುದೇ ಬೇಧ ಭಾವವಿಲ್ಲ,ಭಗವಂತನ ದೃಷ್ಟಿಯಲ್ಲಿ ನಾವೆಲ್ಲರೂ ಮಕ್ಕಳೇ..ಹೌದು, ಜಾತಿ ಮತಗಳನ್ನು ಸೃಷ್ಟಿ ಮಾಡಿದ್ದೇ ಮಾನವ.ಭಗವಂತನನ್ನು ಸ್ಮರಿಸಿದರೆ ಆತ ಯಾರಿಗೂ ಬೇಕಾದರೂ ಒಲಿಯಬಲ್ಲ ಅನ್ನುವಂತಹ ಹಲವಾರು ಘಟನೆಗಳು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿವೆ.ಇದೀಗ ಅದಕ್ಕೆ ಸಾಕ್ಷಿಯೆಂಬಂತೆ ಮತ್ತೊಂದು ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.
ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇಗುಲದ ಬಳಿ ಇರುವ ಮಹಾಕಾಳಿ ದೇವಾಸ್ಥಾನದ ಬಳಿ ಮುಸ್ಲಿಂ ಯುವಕರಿಬ್ಬರು ಬಂದು ಒಂದಷ್ಟು ಹೊತ್ತು ಅಲ್ಲೇ ಸಮೀಪವಿರುವ ನೇತ್ರಾವತಿ ನದಿಗಿಳಿಯುವ ಮೆಟ್ಟಿಲ ಬಳಿಯಲ್ಲೇ ಮಾತನಾಡಿಕೊಳ್ಳುತ್ತಾರೆ. ಬಳಿಕ ಅವರಲ್ಲಿ ಒಬ್ಬಾತ ದೂರದಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾದ ಬಳಿ ಹೋಗಿ ನೀಲಿ ಬಣ್ಣದ ಪ್ಲ್ಯಾಸ್ಟಿಕ್ ನೊಂದಿಗೆ ದೇವಾಲಯದ ಬಳಿ ಬರುತ್ತಾನೆ. ಇಬ್ಬರೂ ಬ್ಯಾರಿ ಭಾಷೆ ಮಾತನಾಡುತ್ತಿದ್ದು, ಇವರೇನು ಮಾಡುತ್ತಿದ್ದಾರೆಂದು ಅಲ್ಲಿ ನೆರೆದಿದ್ದ ಭಕ್ತರ ಕುತೂಹಲ ಮತ್ತಷ್ಟು ಗರಿಗೆದರಿತು. ಆ ನಂತರ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ 10-15 ತೆಂಗಿನಕಾಯಿಗಳೊಂದಿಗೆ ಮಹಾಕಾಳಿ ದೇವಾಲಯದ ಬಳಿಯಿರುವ ನದಿಗಿಳಿಯುವ ಮೆಟ್ಟಿಲಿನತ್ತ ಹೆಜ್ಜೆ ಹಾಕಿ ಮೆಟ್ಟಿಲಿಗೆ ಒಂದೊಂದೆ ತೆಂಗಿನ ಕಾಯಿಯನ್ನು ಒಡೆಯತೊಡಗುತ್ತಾರೆ.ಈ ಘಟನೆಗೆ ನೆರೆದ ಭಕ್ತರು ಸಾಕ್ಷಿಯಾಗಿದ್ದರು.ಇನ್ನೂ ಒಂದು ವಿಶೇಷತೆಯೆಂದರೆ ಇಬ್ಬರು ಯುವಕರು ಒಡೆದಿದ್ದ ತೆಂಗಿನ ಕಾಯಿಯೆಲ್ಲವೂ ಮೇಲ್ಮುಖವಾಗಿ ಬಿದ್ದು ಅಲ್ಲಿ ನೆರೆದವರ ಅಚ್ಚರಿಗೂ ಕಾರಣವಾಗಿತ್ತು.
ತೆಂಗಿನ ಕಾಯಿ ಮೇಲ್ಮುಖವಾಗಿ ಬಿದ್ದರೆ, ದೇವರು ಪ್ರಾರ್ಥನೆಯನ್ನು ಸ್ವೀಕರಿಸಿದ್ದಾರೆಂಬ ಅರ್ಥ ನೀಡುತ್ತದೆ ಎಂಬುದು ಬಹಳ ಹಿಂದಿನಿಂದಲೂ ಹಿರಿಯರು ಹೇಳುತ್ತಿದ್ದ ಮಾತು.ಬಳಿಕ ಅಲ್ಲಿದ್ದ ಯುವಕರನ್ನು ಯಾಕಾಗಿ ತೆಂಗಿನ ಕಾಯಿ ಒಡೆದಿದ್ದೀರಿ ಎಂದು ಪ್ರಶ್ನೆ ಮಾಡಲಾಯಿತು.
ಅದಕ್ಕವರು ಉತ್ತರಿಸುತ್ತಾ, ನಮ್ಮ ಮನೆಯಲ್ಲಿ ಮದುವೆ ವಿಚಾರಕ್ಕೆ ಸಂಬಂಧಿಸಿ ಇಲ್ಲಿನ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಹರಕೆ ಹೊತ್ತುಕೊಂಡಿದ್ದೆವು. ನಾವು ಅಂದು ಕೊಂಡ ಬೇಡಿಕೆ ಈಗ ಈಡೇರಿದೆ. ಹಾಗಾಗಿ ಈ ಹರಕೆಯನ್ನು ಆ ದೇವಿಗೆ ಒಪ್ಪಿಸಿದ್ದೇವೆ. ಹರಕೆಯನ್ನು ಹೇಗೆ ತೀರಿಸಬೇಕೆಂಬ ಗೊಂದಲ ಇತ್ತು. ಬಳಿಕ ದೇವಾಲಯದ ಬಳಿಯಲ್ಲಿಯಲ್ಲಿರುವ ನದಿಗಿಳಿಯುವ ಮೆಟ್ಟಿಲಿಗೆ ತೆಂಗಿನ ಕಾಯಿ ಒಡೆಯುವ ಮುಖೇನ ಈ ಹರಕೆ ತೀರಿಸಿದ್ದೇವೆ ಎಂದು ಹೇಳಿದರು. ನಂತರ ಪುರೋಹಿತರು ಹೇಳಿದಂತೆ ಕಾಣಿಕೆ ಹಣವನ್ನು ಅಲ್ಲಿನ ಕಾಣಿಕೆ ಡಬ್ಬಿಗೆ ಹಾಕಿ ಭಕ್ತಿಯಿಂದ ನಮಿಸಿ ಅಲ್ಲಿಂದ ತೆರಳಿದರು ಎನ್ನುವ ಮಾಹಿತಿ ಲಭ್ಯವಾಗಿದೆ. ಉಪ್ಪಿನಂಗಡಿಯ ಮಹಾಕಾಳಿ ದೇಗುಲದಲ್ಲಿ ನಡೆದ ಈ ಸೌಹಾರ್ದಯುತ ಘಟನೆಯು ಇಡೀ ಸಮಾಜಕ್ಕೆ ಸಕಾರಾತ್ಮಕ ಸಂದೇಶವನ್ನು ರವಾನಿಸಿದೆ.